ಬೆಂಗಳೂರು: ಹುಬ್ಬಳ್ಳಿ ಗಲಭೆ ವಿಚಾರದಲ್ಲಿ ಶಾಂತಿ ಕಾಪಾಡಲು ನಮ್ಮ ಪಕ್ಷದ ಎಲ್ಲಾ ನಾಯಕರು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದಾರೆ. ಆದರೂ ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಘಟನೆಗಳಿಗೆ ಮೂಲ ಪ್ರಚೋದನೆ ಬಿಜೆಪಿ. ಈ ಬಗ್ಗೆ ತನಿಖೆ ಆಗಬೇಕೆಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕೆಲವು ಕಿಡಿಗೇಡಿಗಳು ಕಾನೂನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ. ನಮ್ಮ ಜಿಲ್ಲಾಧ್ಯಕ್ಷರಾದ ಅಲ್ತಾಫ್ ಪರಿಸ್ಥಿತಿ ನಿಯಂತ್ರಿಸುವ ಸಂದರ್ಭದಲ್ಲಿ ಕಲ್ಲೇಟು ತಿಂದು, ಕೈ ಮುರಿದುಕೊಂಡು ನೋವು ಅನುಭವಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: 'ಯೌವನದಲ್ಲಿ ಮಾಡಿದ ತಪ್ಪುಗಳಿಗೆ ವೃದ್ಧಾಪ್ಯದಲ್ಲಿ ಪಶ್ಚಾತ್ತಾಪ ಪಟ್ಟರೆ ತಪ್ಪೇನಿಲ್ಲ'
ಆದರೆ ಯಡಿಯೂರಪ್ಪ ಅವರಾಗಲಿ ಅಶೋಕ್ ಅವರಾಗಲಿ ಪರಿಸ್ಥಿತಿ ತಿಳಿಗೊಳಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಬದಲಿಗೆ ಅವರು ಬೇಕೆಂದೇ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಸುಮ್ಮನೆ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಅವರು ತಮ್ಮ 40 % ಕಮಿಷನ್ ವಿಚಾರ ಮುಚ್ಚಿಹಾಕಲು ಈ ವಿಚಾರವನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾರ್ಯಕಾರಣಿ ಸಭೆ: ಕೆಪಿಸಿಸಿ ಕಚೇರಿಯಲ್ಲಿಂದು ಕಾಂಗ್ರೆಸ್ ಅಸಂಘಟಿತ ಕಾರ್ಮಿಕರು ಮತ್ತು ನೌಕರರ ಘಟಕದ ಕಾರ್ಯಕಾರಿಣಿ ಸಭೆಯನ್ನು ಡಿ.ಕೆ. ಶಿವಕುಮಾರ್ ನಡೆಸಿದರು. ಘಟಕದ ರಾಷ್ಟ್ರೀಯ ಉಪಾಧ್ಯಕ್ಷ ಸಂಜಯ್ ಗಾಬ, ರಾಜ್ಯ ಅಧ್ಯಕ್ಷ ಜಿ.ಎಸ್. ಮಂಜುನಾಥ್, ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮಂಡಳಿ ಸದಸ್ಯ ಆರ್.ಕೆ. ನಗರ್ ಮತ್ತಿತರರು ಭಾಗವಹಿಸಿದ್ದರು.