ಬೆಂಗಳೂರು: ಪರಿಷ್ಕರಣೆ ನೆಪದಲ್ಲಿ ಮಕ್ಕಳ ಪಠ್ಯ ಪುಸ್ತಕದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆದಿದೆ. ಪಠ್ಯ ಪುಸ್ತಕದ ವಿಚಾರವಾಗಿ ಸ್ವಾಮೀಜಿಗಳು ಸರ್ಕಾರದ ವಿರುದ್ಧ ಪ್ರಶ್ನೆ ಮಾಡುತ್ತಿರುವುದಕ್ಕೆ ನಮಸ್ಕಾರ ಸಲ್ಲಿಸುತ್ತೇನೆ. ಸರ್ಕಾರ ಮಾಡಲಾಗದ ಕೆಲಸವನ್ನು ಧರ್ಮ ಗುರುಗಳು ಮಾಡುತ್ತಿದ್ದಾರೆ. ಅವರ ಧ್ವನಿಗೆ ಪೂರಕವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರ ವಿಚಾರ ಗಮನ ಹರಿಸುವುದಾಗಿ ಸಿಎಂ ಹೇಳಿದ್ದಾರೆ. ನಾಗ್ಪುರ ಎಜುಕೇಷನ್ ಪಾಲಿಸಿ ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಗೌತಮ ಬುದ್ಧ, ಮಹಾವೀರರ ಬಗ್ಗೆ ಏಕವಚನ ಬಳಸಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು. ಅಂಬೇಡ್ಕರ್ ಅವರ ತಂದೆ, ಹುಟ್ಟಿದ ಊರು ಎಲ್ಲ ತೆಗೆಯಲಾಗಿದೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇವೆ. ಇದು ಭಾರತದ ಪುಣ್ಯ ಭೂಮಿಗೆ ಮಾಡಿದ ಅಪಮಾನ. ಅಂಬೇಡ್ಕರ್ ಈ ದೇಶದ ಆಸ್ತಿ ಎಂದರು.
ಸರ್ಕಾರ ವಿರುದ್ಧ ಜೂ.9 ರಂದು ಪ್ರತಿಭಟನೆ: ಪಠ್ಯ ಪುಸ್ತಕ ತಿರುಚಿರುವವರ ವಿರುದ್ಧ ಜೂನ್ 9 ರಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ. ಇದರಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ತಾವು ಸೇರಿದಂತೆ ಎಲ್ಲ ಶಾಸಕರು ಪಾಲ್ಗೊಳ್ಳಲಿದ್ದು, ಸರ್ಕಾರದ ಈ ನೀತಿಯನ್ನು ಖಂಡಿಸುತ್ತೇವೆ ಎಂದು ಶಿವಕುಮಾರ್ ಇದೇ ವೇಳೆ ಘೋಷಿಸಿದರು.
ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗ ಹಾಕಿ: ಬಿಜೆಪಿಯವರ ಮನಸ್ಥಿತಿ ಸರಿ ಇಲ್ಲ. ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಹಾಕಬೇಕು. ಹಳೇ ಪಠ್ಯದಲ್ಲೇ ಶಿಕ್ಷಣ ಮುಂದುವರಿಯಬೇಕು ಎಂದು ಒತ್ತಾಯಿಸಿದ ಡಿಕೆಶಿ, ರೋಹಿತ್ ಚಕ್ರತೀರ್ಥ ಮನೆಗೆ ಪೊಲೀಸ್ ಭಧ್ರತೆ ಅಲ್ಲ ಪ್ಯಾರ ಮಿಲಿಟರಿ ಹಾಕಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಕುವೆಂಪು ಅವರ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟವರಿಗೆ ಲಘುವಾಗಿ ಮಾತನಾಡುವುದು ಬಿಜೆಪಿ ಮನಸ್ಥಿತಿ ಸರಿ ಇಲ್ಲ. ಭಗತ್ ಸಿಂಗ್ ಯುವಕರಿಗೆ ಸ್ಪೂರ್ತಿ. ಅವರ ವಿಚಾರ ಕೈ ಬಿಡುತ್ತಾರೆ. ನಾರಾಯಣಗುರು ಸ್ತಬ್ದ ಚಿತ್ರ ಕೈ ಬಿಟ್ಟರು. ಈಗ ಪಠ್ಯದಿಂದ ಕೈ ಬಿಟ್ಟಿದ್ದಿರಿ, ಅದರಿಂದ ಏನು ತೊಂದರೆ ಆಗುತ್ತೆ ಅಂತಾ ಹೇಳ ಬೇಕು. ಧಾರ್ಮಿಕ ಚಳವಳಿ ಮಾಡಿದ ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಪೆರಿಯರ್ ವಿಚಾರಕ್ಕೆ ಕತ್ತರಿ ಹಾಕಿ ತಿರುಚಿದ್ದಾರೆ. ಸಾವಿತ್ರಿ ಬಾಯಿ ಪುಲೆ, ಭಕ್ತಿ ಮತ್ತು ಸೂಫಿ ಪಂತ ತೆಗೆಯಲಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಗೊಬ್ಬರ ಬ್ಲಾಕ್ ಮಾರ್ಕೆಟ್ನಲ್ಲಿ ಹಂಚಿಕೆ : ರೈತರು ಕಷ್ಟದಲ್ಲಿದ್ದಾರೆ. ಮಳೆಯಾಗುತ್ತಿದೆ. ಬೆಳೆ ಹಾಕುವುದಕ್ಕೆ ಸರಿಯಾಗಿ ಗೊಬ್ಬರ ಸಿಗುತ್ತಿಲ್ಲ. ಗೊಬ್ಬರಕ್ಕೆ ಮರಳು ತುಂಬಿ ಮಾರಾಟ ಮಾಡುತ್ತಿದ್ದಾರೆ. ದೊಡ್ಡ ಮಾಫಿಯಾ ಜೊತೆ ಸರ್ಕಾರ ಶಾಮಿಲಾಗಿದೆ ಎಂದು ಶಿವಕುಮಾರ್ ಆರೋಪಿಸಿದರು.
ಗೊಬ್ಬರದ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳ ಜೊತೆ ಸರ್ಕಾರ ಶಾಮೀಲಾಗಿದೆ. ಶೇಕಡಾ 40, 50 ಕ್ಕಿಂತ ಹೆಚ್ಚಿನ ದರದಲ್ಲಿ ಬ್ಲಾಕ್ ಮಾರ್ಕೆಟ್ ನಲ್ಲಿ ವ್ಯಾಪಾರ ಆಗುತ್ತಿದೆ. ನಾನು ನನ್ನದೇ ತನಿಖೆ ನಡೆಸಿ ರೈತರ ಜೊತೆ ಮಾತನಾಡಿ ಹೇಳುತ್ತಿದ್ದೇನೆ. ನವಲಗುಂದದಲ್ಲಿ ಕೇವಲ 23 ಮಂದಿಗೆ ಗೊಬ್ಬರ ಕೊಟ್ಟಿದ್ದಾರೆ. ನಿಮಗೆ ರೈತರನ್ನು ಕಂಡರೆ ಏಕೆ ಸಿಟ್ಟು? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಆತ್ಮಸಾಕ್ಷಿ ಮತ ಕೊಡಿ: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಶಿವಕುಮಾರ್, ಆತ್ಮಸಾಕ್ಷಿಯ ಮತವನ್ನು ಕೊಡಿ ಎಂದು ಕರೆ ಕೊಟ್ಟಿದ್ದೇವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಕರೆ ಕೊಟ್ಟಿದ್ದಾರೆ. ನಾವು ಎಲ್ಲರಿಗೂ ಸಹಾಯ ಮಾಡಿದ್ದೇವೆ. ಮತ ವೇಸ್ಟ್ ಮಾಡಬೇಡಿ, ಪ್ರತಿಷ್ಠೆ ಬೇಡ, ಜಾತ್ಯತೀತತೆಯನ್ನು ತೋರಿಸಿ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ಹೇಳಿದರು.
ಇದನ್ನೂ ಓದಿ: ಚಡ್ಡಿ ಜಟಾಪಟಿ: ಬಿಜೆಪಿಯಿಂದ ಸಿದ್ದರಾಮಯ್ಯ ಮನೆಗೆ ತೆರಳಿ ಚಡ್ಡಿ ತಲುಪಿಸುವ ಆಂದೋಲನ