ಬೆಂಗಳೂರು: ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡ್ತೀವಿ ಎಂದು ನಾಜೂಕಾಗಿ ಮಾತಾಡೋ ಫೈನಾನ್ಸ್ ಕಂಪನಿಗಳ ಅಸಲಿಯತ್ತು ಈಗ ಬಯಲಾಗಿದೆ. ಕಡಿಮೆ ಬಡ್ಡಿ ಎಂದು ಸಾಲ ಮಾಡಿದ್ದ ಮಂದಿ ಈಗ ಕಂಪನಿ ವಿಧಿಸಿರುವ ನಾಲ್ಕು ಪಟ್ಟು ಬಡ್ಡಿದರ ಕೇಳಿ ದಿಗ್ಭ್ರಾಂತರಾಗಿದ್ದಾರೆ.
ಬೆಂಗಳೂರಿನ ಬಜಾಜ್ ಫೈನಾನ್ಸ್ ಕಂಪನಿ ಆರಂಭದಲ್ಲಿ ಕಡಿಮೆ ಬಡ್ಡಿ ಆಸೆ ತೋರಿಸಿ, ಸಾಲ ನೀಡಿತ್ತು. ಆದರೆ, ಈಗ ಮೊದಲಿನಿ ಬಡ್ಡಿದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬಡ್ಡಿಯನ್ನು ಸಾಲಗಾರರ ಮೇಲೆ ಹೇರಿ ಚಿತ್ರಹಿಂಸೆ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರಾಜಾಜಿನಗರ ಮೋದಿ ಜಂಕ್ಷನ್ ಬಳಿ ಇರುವ ಬಜಾಜ್ ಫೈನಾನ್ಸ್ ಕಂಪನಿಯು ಆನ್ಲೈನ್ ಮೂಲಕ ಹಲವು ಗ್ರಾಹಕರ ಹಣವನ್ನು ಕಟ್ ಮಾಡಿಕೊಂಡಿತ್ತು. ಕಂಪನಿ ಮುಂದೆ ಜಮಾವಣೆಗೊಂಡಿದ್ದ ಗ್ರಾಹಕರು ತಮ್ಮ ಸಮಸ್ಯೆ ಹೇಳಿಕೊಂಡರು.
ಫೈನಾನ್ಸ್ ಕಂಪನಿಯಿಂದ ಕರೆ ಮಾಡಿ, ಶೇ.8 ಬಡ್ಡಿದರದಲ್ಲಿ ಸಾಲ ಕೊಡ್ತೀವಿ ಅಂದರು. ಬೇರಾವ ಹೆಚ್ಚುವರಿ ಹಣ ಪಡೆಯಲ್ಲ ಅಂತಾನೂ ಹೇಳಿದ್ದರು. ಕಡಿಮೆ ಬಡ್ಡಿ ಅನ್ನೋ ಆಸೆಗೆ ಸಾಲ ಪಡೆದೆ. ಒಂದು ವರ್ಷವಾದ ಮೇಲೆ ತಿಳಿಯಿತು, ಇವರು ಶೇ.15ರಷ್ಟು ಬಡ್ಡಿದರ ಹಾಕ್ತಿದ್ದಾರೆ ಎಂದು. ಸದ್ಯ ನನ್ನ ಸಾಲದಲ್ಲಿ 1 ಲಕ್ಷ ಮಾತ್ರ ಕಟ್ಟಿದ್ದೇನೆ. ಇನ್ನೂ 4 ಲಕ್ಷ ಹಣ ಬಾಕಿಯಿದೆ. ಬಾಕಿಮೊತ್ತಕ್ಕೆ ಪ್ರತಿದಿನ ಶೇ. 4.6 ಹೆಚ್ಚುವರಿ ಬಡ್ಡಿ ಹಾಕ್ತಿದ್ದಾರೆ. ಬರೀ 4 ದಿನಕ್ಕೆ 16 ಸಾವಿರ ಹೆಚ್ಚುವರಿ ಬಡ್ಡಿ ಹಾಕಿದ್ದಾರೆ. ಬಡ್ಡಿ ಹೆಸರಲ್ಲಿ ನಮ್ಮ ರಕ್ತ ಹೀರುತ್ತಿದ್ದಾರೆ ಎಂದು ರಾಜರಾಜೇಶ್ವರಿ ನಗರ ನಿವಾಸಿ ಸುರೇಂದ್ರ ಕುಮಾರ್ ನೋವು ತೋಡಿಕೊಂಡರು.
ಈ ಮೊದಲು ಕೇವಲ ಶೇ. 5ರಷ್ಟು ಬಡ್ಡಿ ಎಂದವರು ಈಗ 20-30 ಪರ್ಸೆಂಟ್ ಬಡ್ಡಿ ಆಗುತ್ತೆ ಅಂತಿದ್ದಾರೆ. ನನ್ನದಿನ್ನೂ 20 ಸಾವಿರ ರೂ. ಬಡ್ಡಿ ಕಟ್ಟುವುದಿದೆ. ಶ್ರೀಮಂತರ್ಯಾರು ಸಾಲ ಪಡೆಯೋದಿಲ್ಲ. ಬಡವರ ಅವಶ್ಯಕತೆಗಾಗಿ ಸಾಲ ಮಾಡ್ತಾರೆ. ಇವರು ಇಷ್ಟು ಬಡ್ಡಿ ಕೇಳ್ತಾರೆ ಅನ್ನುವಾಗ, ಫೈನಾನ್ಸರ್ಗಳಿಂದಲೇ ಹಣ ಪಡೆಯಬಹುದಲ್ಲ ಅಂತಾ ರಾಜಾಜಿನಗರದ ಮಹೇಶ್ ಎಂಬುವರು ತಮಗಾದ ನೋವು ತೋಡಿಕೊಂಡರು.
ಅಷ್ಟೇ ಅಲ್ಲದೆ, ಬಡ್ಡಿ ಕಟ್ಟೋದು ತಡವಾದ್ರೇ ದಿನದ ಬಡ್ಡಿ ಹೆಸರಲ್ಲಿ ಸುಲಿಗೆಗೆ ಮಾಡ್ತಿದ್ದಾರೆ. ಮೀಟರ್ ಬಡ್ಡಿ ರೂಪದಲ್ಲಿ ಬಡ್ಡಿ ವಸೂಲಿ ಮಾಡ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ. NOC ತೆಗೆದುಕೊಂಡರೂ ಬ್ಯಾಂಕ್ ಮತ್ತು ಆನ್ ಲೈನ್ ಮೂಲಕ ಹಣ ಕಟ್ ಮಾಡಿರ್ತಾರೆ. ಕೇಳಿದ್ರೇ ಟೆಕ್ನಿಕಲ್ ಪ್ರಾಬ್ಲಂ ಅಂತಾ ಸಬೂಬು ನೀಡ್ತಾರೆ ಎಂದೂ ಆರೋಪಿಸಿದರು.
ತಮಗಾದ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ಬಂದಿದ್ದ ಗ್ರಾಹಕರು, ಸಮಸ್ಯೆ ಬಗೆಹರಿಸುತ್ತೇವೆಂಬ ಮ್ಯಾನೇಜರ್ ಮಾತು ಕೇಳಿ ವಾಪಸಾದರು.