ಬೆಂಗಳೂರು: ಯಾರಿಗೆ ಯಾವ ಖಾತೆ ಕೊಡಬೇಕು ಅನ್ನೋದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಮಾಧಿಕಾರ. ಅವರು ಸೂಕ್ತ ನಿರ್ಣಯವನ್ನೇ ತೆಗೆದುಕೊಂಡಿರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಶ್ರೀರಾಮುಲು ನಮ್ಮ ಪಕ್ಷದ ಪ್ರಮುಖ ನಾಯಕರು. ಅವರು ಆರೋಗ್ಯ ಇಲಾಖೆಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ದೊಡ್ಡ ಖಾತೆ ಸಮಾಜ ಕಲ್ಯಾಣ ಇಲಾಖೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಖಾತೆ ಬದಲಾವಣೆ ಶ್ರೀರಾಮುಲುಗೆ ಗೊತ್ತಿರಲಿಲ್ಲ ಅನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಸಿಎಂ ಅವರಿಗೆ ಆಪ್ತರು. ಆಪ್ತತೆಯ ಕಾರಣಕ್ಕೆ ಒಮ್ಮೊಮ್ಮೆ ಸಿಎಂ ವ್ಯಕ್ತಿಗತ ನಿರ್ಣಯ ಕೈಗೊಂಡಿರುತ್ತಾರೆ. ಖಾತೆ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು ಸಿಎಂ ಪರಮಾಧಿಕಾರ ಎಂದರು.
ಮಾಜಿ ಶಾಸಕ ಮುನಿರತ್ನ ವಿರುದ್ಧದ ಅರ್ಜಿ ವಜಾ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ತೀರ್ಪನ್ನು ಗಮನಿಸಿದೆ. ಬಿಜೆಪಿ ಸಂಸದೀಯ ಮಂಡಳಿ ಏನು ತೀರ್ಮಾನ ಕೈಗೊಳ್ಳುತ್ತದೋ ಗೊತ್ತಿಲ್ಲ. ರಾಷ್ಟ್ರೀಯ ನಾಯಕರಿಗೆ ವಾಸ್ತವಾಂಶ ಸಂಗತಿಗಳನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಾಗಿದೆ. ರಾಜ್ಯದ ಸ್ಥಿತಿ ನೋಡಿಕೊಂಡು ಹೈಕಮಾಂಡ್ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದೆ ಎಂದರು.
ಕೋರ್ಟ್ ತೀರ್ಪು ಬಳಿಕ ಮುನಿರತ್ನ ಜೊತೆ ಮತ್ತು ತುಳಸಿ ಮುನಿರಾಜುಗೌಡ ಜೊತೆ ವ್ಯಕ್ತಿಗತವಾಗಿ ಚರ್ಚೆ ಮಾಡಿದ್ದೇವೆ. ಇಬ್ಬರ ಜತೆಗೂ ವೈಯಕ್ತಿಕ ಮಾತುಕತೆ ನಡೆಸಿದ್ದೇವೆ. ಪಕ್ಷದ ನಿರ್ಣಯಕ್ಕೆ ಬದ್ಧರಾಗಿರುತ್ತೇವೆ ಎಂದು ಇಬ್ಬರೂ ಹೇಳಿದ್ದಾರೆ. 16ರೊಳಗೆ ಟಿಕೆಟ್ ಘೋಷಣೆ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಗೆ ಇಬ್ಬರಿಂದ ಬಂಡಾಯ ಬಿಸಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಜೊತೆ ಸಹಕರಿಸಿ ಅಂತ ಅವರಿಗೆ ಹೇಳುತ್ತೇನೆ. ತಾಳಿದವನು ಬಾಳಿಯಾನು ಅನ್ನೋ ಗಾದೆ ಮಾತಿದೆ. ನೀವು ಸ್ಪರ್ಧಿಸಿದ್ರೂ, ಇಲ್ಲದಿದ್ರೂ ಗೆಲ್ಲೋದೇ ಬಿಜೆಪಿ. ನಿಮ್ಮ ಭವಿಷ್ಯದ ದೃಷ್ಟಿಯಿಂದ ನೀವು ನಿವೃತ್ತಿ ಘೋಷಿಸಿ. ಬಂಡಾಯ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರ ಅಧ್ಯಕ್ಷರಿಗೆ ಬಿಟ್ಟದ್ದು ಎಂದು ತಿಳಿಸಿದರು.