ಬೆಂಗಳೂರು : ಹೂಡಿಕೆ ಸೋಗಿನಲ್ಲಿ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಹಣ ಪಾವತಿಸಿಕೊಂಡು ಡಬಲ್ ಮಾಡಿಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಬೃಹತ್ ಜಾಲವನ್ನ ಸಿಸಿಬಿ ಬಯಲಿಗೆಳೆದಿದೆ. ಲಾಕ್‌ಡೌನ್ ವೇಳೆ ಆರೋಪಿಗಳು ಗೂಗಲ್ ಫ್ಲೇ ಸ್ಟೋರ್ ಮುಖಾಂತರ ಶೇರ್ ಹ್ಯಾಶ್ ಅಫ್ಲೀಕೇಷನ್ ಇನ್ ಸ್ಟಾಲ್ ಮಾಡುವಂತೆ ಮೆಸೇಜ್ ಮಾಡುತ್ತಿದ್ದರು.
ಈ ಮೂಲಕ ಹಿಲೀಯಂ ಕ್ರಿಪ್ಟೋ ಟೋಕನ್ಗೆ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದಿಸಬಹುದು ಎಂದು ನಂಬಿಸಿ ವಂಚಿಸಿದ್ದಾರೆ. ಆರಂಭದಲ್ಲಿ ಗ್ರಾಹಕರಿಗೆ ನಂಬಿಕೆ ಬರಲು 5 ಸಾವಿರ ಇನ್ವೆಸ್ಟ್ ಮಾಡಿದ್ರೆ ಪ್ರತಿ ದಿನ 49 ರೂಪಾಯಿ ಬಡ್ಡಿ ಕೊಡುತ್ತಿದ್ದರು. ಜನರಿಗೆ ನಂಬಿಕೆ ಬಂದು ಹಣ ಹೂಡಿಕೆ ಮಾಡೋಕೆ ಶುರು ಮಾಡಿದ್ದರು. ಇದಕ್ಕಾಗಿ 900 ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಪ್ರತಿ ಗ್ರೂಪ್‌ನಲ್ಲಿ 256 ಜನ ಸದಸ್ಯರಾಗಿದ್ದರು.
ಹೂಡುವವರ ಸಂಖ್ಯೆ ಹೆಚ್ಚಾದಂತೆ ಶೇರ್ ಹ್ಯಾಶ್ ಡಾಟ್ ಕಾಮ್ ಕಂಪನಿಗೆ ಐದು ಕಂಪನಿಗಳಾದ ಕೋಟ್ಯಾಟ್ ಟೆಕ್ನಾಲಜಿ ಕಂಪನಿ, ಸಿರಾಲಿನ್ ಟೆಕ್ ಸಲ್ಯೂಷನ್ ಪ್ರೈವೈಟ್ ಲಿಮಿಟೆಡ್, ನೈಲಿನ್ ಇನ್‌ಫೋಟೆಕ್ ಪ್ರೈವೈಟ್ ಲಿಮಿಟೆಡ್, ಮಾಲ್ಟ್ರೆಸ್ ಎಕ್ಸಿಮ್ ಪ್ರೈವೈಟ್ ಲಿಮಿಟೆಡ್ ಹಾಗೂ ಕ್ರಾಪಿಂಗಟನ್ ಟೆಕ್ನಾಲಜಿ ಪ್ರೈವೈಟ್ ಕಂಪನಿಗಳಿಗೆ ಲಿಂಕ್ ಮಾಡಿ ಅದರ ಬ್ಯಾಂಕ್ ಖಾತೆಗಳಿಗೆ ಸಾರ್ವಜನಿಕರಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡುತ್ತಿದ್ದರು.
2022ರ ಜನವರಿಯಲ್ಲಿ ಶೇರ್ ಹ್ಯಾಶ್ ಅಪ್ಲಿಕೇಷನ್ ದೋಷಪೂರಿತವಾಗಿದೆ ಅದನ್ನ ಅಪ್ಡೇಟ್ ಮಾಡಿ ಎಂದು ಸಂದೇಶ ರವಾನಿಸಿದ್ದರು. ಹೊಸ ಅಪ್ಲಿಕೇಷನ್ ಆದ 2.0 ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡ್ತಿವಿ ಎಂದು ನಂಬಿಸಿದ್ದರು. ಹೇಳಿದ ಸಮಯಕ್ಕೆ ಅಪ್ಲಿಕೇಷನ್ ಅಪ್ಗ್ರೇಡ್ ಆಗಿಲ್ಲ, ಹೂಡಿಕೆದಾರರಿಗೆ ಯಾವುದೇ ರಿಟರ್ನ್ ನೀಡಿರಲಿಲ್ಲ.
ಈ ಸಂಬಂಧ ಪರಿಶೀಲಿಸಿದಾಗ ಮೋಸವಾಗಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ಇಮ್ರಾನ್, ಶೀತಲ್ ಬಸ್ತವಾಡಿ, ಜಬಿವುಲ್ಲಾಖಾನ್, ರೆಹಮತ್ಉಲ್ಲಾಖಾನ್ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳು ಸುಮಾರು 40 ಕೋಟಿ ಹಣ ವಂಚಿಸಿದ್ದು, ಸದ್ಯ 2 ಕೋಟಿ ಮೌಲ್ಯದ ಚಿನ್ನಾಭರಣ, 17 ಕೋಟಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ನೇಣು ಬಿಗಿದುಕೊಂಡ!