ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರನ್ನು ಉಚ್ಚಾಟನೆ ಮಾಡಲು ಜೆಡಿಎಸ್ ತೀರ್ಮಾನಿಸಿದೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ್ ಗೌಡ ಹಾಗೂ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ (ವಾಸು) ಅವರನ್ನು ಉಚ್ಚಾಟನೆ ಮಾಡಲು ಪಕ್ಷ ನಿರ್ಧರಿಸಿದೆ ಎಂದು ಹೇಳಿದರು.
ಇಬ್ಬರು ಶಾಸಕರ ಮನೆ ಮುಂದೆ ಜನ ಪ್ರತಿಭಟನೆ ಮಾಡಿದ್ದಾರೆ. ಮಾನ ಮರ್ಯಾದೆ ಇದ್ದರೆ ಅವರು ರಾಜೀನಾಮೆ ಕೊಡಬೇಕು. ಅವರ ಸದಸ್ಯತ್ವ ರದ್ದು ಮಾಡುವಂತೆ ಸ್ಪೀಕರ್ಗೂ ನಾವು ಮನವಿ ಮಾಡುತ್ತೇವೆ. ಕೋರ್ಟ್ಗೂ ನಾವು ಹೋಗುತ್ತೇವೆ ಎಂದು ಸಿಎಂ ಇಬ್ರಾಹಿಂ ಇದೇ ವೇಳೆ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ವಿರುದ್ಧ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ಮಾಡುತ್ತೇವೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ಬಿ ಟೀಂ ಅನ್ನೋದು ಗೊತ್ತಾಗಿದೆ. ಕಾಂಗ್ರೆಸ್ನವರು ಡೀಲ್ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ಇದರಲ್ಲಿ ಭಾಗಿಯಾಗಿದೆ.
ಸಿ.ಟಿ ರವಿ ಕಾಂಗ್ರೆಸ್ ಕಚೇರಿಗೆ ಹೋಗಿ ಧನ್ಯವಾದ ಹೇಳಿದ್ದಾರೆ. ಸುರ್ಜೇವಾಲಾ, ಆ ವಾಲಾ, ಈ ವಾಲಾಗಳು ಹೇಳ್ತಾರಲ್ಲ, ಯಾವ ಮುಖ ಇಟ್ಟುಕೊಂಡು ಮಾತನಾಡುತ್ತಾರೆ. ಮನ್ಸೂರ್ ಖಾನ್ ಅವರನ್ನು ನಿಲ್ಲಿಸಿ ಹೀಗೆ ಸೋಲಿಸಿದಿರಲ್ಲ. ಇದರಿಂದ ಏನು ಲಾಭ? ಎಂದು ಪ್ರಶ್ನಿಸಿದರು. 2ನೇ ಪ್ರಾಶಸ್ತ್ಯ ಮತ ಹಾಕಿದ್ದರೂ ನಮ್ಮ ಅಭ್ಯರ್ಥಿ ಗೆಲ್ಲುತ್ತಿದ್ದರು. ಈ ಚುನಾವಣೆಯಲ್ಲಿ ನೂರಾರು ಕೋಟಿ ವ್ಯವಹಾರ ನಡೆದಿದೆ ಎಂದು ಇಬ್ರಾಹಿಂ ಆರೋಪಿಸಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಜನ ನಮಗೆ ಮತ ಹಾಕುತ್ತಾರೆ. ದೊಡ್ಡ ಶಕ್ತಿಯಾಗಿ ಜೆಡಿಎಸ್ ಹೊರ ಹೊಮ್ಮಲಿದೆ. 30 ಜನರನ್ನು ನಾವು ಇಟ್ಟುಕೊಂಡಿದ್ದೇವೆ. ಬಡತನದ ಪಾರ್ಟಿ ಇದು. ಆದರೂ ನಮಗೆ ಗೌರವ ಇದೆ. ಪ್ರಜಾಪ್ರಭುತ್ವದ ಸಿದ್ದಾಂತವನ್ನು ನಮ್ಮ ಶಾಸಕರು ಎತ್ತಿ ಹಿಡಿದಿದ್ದಾರೆ. ಅಲ್ಪ ಸಂಖ್ಯಾತರಿಗೆ ಗೊತ್ತಾಗಿದೆ. ನನ್ನನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಅಲ್ಪಸಂಖ್ಯಾತ, ರೈತರ ಮಕ್ಕಳಿಗೆ ಜೆಡಿಎಸ್ ಏನು ಮಾಡ್ತಾ ಇದೆ ಎಂದು ಜನರಿಗೆ ಗೊತ್ತಾಗಿದೆ ಎಂದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ಸಿದ್ದರಾಮಯ್ಯ ಮಾತನಾಡದೇ ಇರುವುದು ಒಳ್ಳೆಯದು. ನೀವು ಮಾಡಿದ ಕೆಲಸ ಒಳ್ಳೆದಲ್ಲ. ಜನರ ಮುಂದೆ ಬೆತ್ತಲೆ ಆಗಿದ್ದೀರಾ. ಎರಡನೇ ಪ್ರಾಶಸ್ತ್ಯದ ಮತ ಹಾಕುವುದಕ್ಕೆ ಏನಾಗಿತ್ತು? ಶ್ರೀನಿವಾಸ್ ಗೌಡರನ್ನು ಯಾಕೆ ಕರೆದುಕೊಂಡು ಹೋದರು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಾನು ಖಾಲಿ ಮತಪತ್ರ ಹಾಕಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ: ಜೆಡಿಎಸ್ ಶಾಸಕ ಶ್ರೀನಿವಾಸ್