ಬೆಂಗಳೂರು : ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರಿ ಕಟ್ಟಡಗಳಲ್ಲಿ ಬಿಜೆಪಿ ಪಕ್ಷದ ಬ್ಯಾನರ್‌ಗಳನ್ನು ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕಿ ಸೌಮ್ಯ ರೆಡ್ಡಿ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿರುವ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಇಡೀ ಜಗತ್ತು ಮಹಾಮಾರಿ ಕೊರೊನಾ ವೈರಸ್‌ನಿಂದ ತತ್ತರಿಸಿದೆ. ಕಳೆದೊಂದು ವರ್ಷದಿಂದ ಈ ಮಹಾಮಾರಿ ರೋಗಕ್ಕೆ ಔಷಧ ಕಂಡು ಹಿಡಿಯಲು ಪ್ರಪಂಚದ ಎಲ್ಲಾ ದೇಶಗಳು ಪ್ರಯತ್ನಿಸುತ್ತಿವೆ.
ಸದ್ಯ ನಮ್ಮ ದೇಶದಲ್ಲಿ ಕೊರೊನಾ ರೋಗಕ್ಕೆ ಲಸಿಕೆ ಕಂಡು ಹಿಡಿದು ದೇಶಾದ್ಯಂತ ನೀಡುತ್ತಿರುವುದು ಸರಿಯಷ್ಟೇ.. ನಮ್ಮ ರಾಜ್ಯದಲ್ಲಿಯೂ ಸಹ ಹಲವು ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ.
ಕೋವಿಡ್ ಹರಡುವುದನ್ನು ತಡೆಗಟ್ಟುವ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ 2020 ಜುಲೈನಲ್ಲಿ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಜಿಎಂಪಿ)ಗೆ ಬೆಂಗಳೂರು ನಗರದಲ್ಲಿ ಹೋರ್ಡಿಂಗ್ಗಳನ್ನು ಪ್ರದರ್ಶಿಸಲು ಅನುಮತಿ ನೀಡಿತ್ತು ಎಂದು ವಿವರಿಸಿದ್ದಾರೆ.
ಆದರೆ, ಸರ್ಕಾರ ನೀಡುವ ಲಸಿಕಾ ಕಾರ್ಯಕ್ರಮಕ್ಕೆ ಪಕ್ಷದ ಹೆಸರನ್ನು ದಾಖಲಿಸುವುದು ಎಷ್ಟರ ಮಟ್ಟಿಗೆ ಸರಿ? ಲಸಿಕೆಯನ್ನು ಸರ್ಕಾರ ನೀಡುತ್ತಿದೆಯೋ ಆಥವಾ ರಾಜಕೀಯ ಪಕ್ಷ ನೀಡುತ್ತಿದೆಯೋ? ಜಯನಗರ ಸಾರ್ವಜನಿಕ ಆಸ್ಪತ್ರೆ, ಸಾರಕ್ಕಿ ಒಹೆಚ್‌ಸಿ, ಬೃಂದಾವನನಗರ ಪಿಹೆಚ್‌ಸಿ ಹಾಗೂ ಬೆಂಗಳೂರಿನ ಇತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಿಜೆಪಿ ಪಕ್ಷದ ಹೆಸರಿನೊಂದಿಗೆ ಕೋವಿಡ್ ಲಸಿಕೆ ವಿತರಣೆ ಮಾಡುತ್ತಿರುವ ಬ್ಯಾನರ್‌ಗಳನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಈ ರೀತಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಪಕ್ಷದ ಬ್ಯಾನರ್‌ಗಳನ್ನು ಹಾಕಲು ಅವಕಾಶ ಕೊಟ್ಟವರಾರು? ಸರ್ಕಾರಿ ಕಟ್ಟಡಗಳಲ್ಲಿ ಯಾವುದೇ ರೀತಿಯ ರಾಜಕೀಯ ಪಕ್ಷದ ವ್ಯಕ್ತಿ ಹಾಗೂ ಚಿಹ್ನೆ ಬಳಸುವಂತಿಲ್ಲ. ಇದು ಸಂವಿಧಾನ ಬಾಹಿರ. ಸಂವಿಧಾನಾತ್ಮಕವಾದ ಕಾನೂನು ಕಟ್ಟಳೆಗಳನ್ನು ಮೀರಿ ಇಂತಹ ಕೆಲಸ ಮಾಡುತ್ತಿದ್ದಾರೆ.
ಎರಡು ವರ್ಷದ ಹಿಂದೆಯೇ ಹೈಕೋರ್ಟ್ ಆದೇಶದ ಅನ್ವಯ ಯಾವುದೇ ಪಕ್ಷದ ಬ್ಯಾನರ್ ಮತ್ತು ಫ್ಲೆಕ್ಸ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುವಂತಿಲ್ಲ. ಹಾಗಿದ್ದರೂ ಸಹ ಈ ರೀತಿಯ ಘಟನೆಗಳು ಬಿಜೆಪಿ ಪಕ್ಷದಿಂದ ನಡೆಯುತ್ತಲೇ ಇವೆ. ಕೋರ್ಟ್ನ ಆದೇಶವಿದ್ದರೂ ಸಹ ಈ ರೀತಿ ಪ್ರಚಾರ ಗಿಟ್ಟಿಸುವ ತಂತ್ರವನ್ನು ಕೋವಿಡ್ ಲಸಿಕೆ ನೀಡುವುದರಲ್ಲಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಮಯದಲ್ಲಿ ಬಿಜೆಪಿ ಪಕ್ಷ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಶಾಸಕರ ಭಾವಚಿತ್ರಗಳೊಂದಿಗೆ ಪಕ್ಷವು ಆರೋಗ್ಯ ಕಿಟ್ಗಳನ್ನು ಮತ್ತು ಪರಿಹಾರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ.
ಈ ರೀತಿ ನಾಚಿಕೆಯಿಲ್ಲದೆ ವ್ಯಕ್ತಿ ಹಾಗೂ ಪಕ್ಷದ ಪ್ರಚಾರ ಮಾಡುವುದು ಹಾಗೂ ಅಭಿಯಾನ ನಡೆಸುವುದು ಸಮಂಜಸವಾದುದಲ್ಲ. ಯಾವುದೇ ಸರ್ಕಾರವು ಜನರ ಒಳಿತಿಗಾಗಿ ಹಾಗೂ ಆರೋಗ್ಯದ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸಬೇಕೇ ಹೊರತು ಈ ರೀತಿ ನಡೆದುಕೊಳ್ಳಬಾರದು.
ಇದು ಸಾರ್ವಜನಿಕರಿಗೆ ಇರುವ ಲಸಿಕೆಯೇ ಹೊರತು ಬಿಜೆಪಿ ಲಸಿಕೆಯಲ್ಲ. ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರ ಆದಷ್ಟು ಬೇಗ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾದ ಸಮಯದಲ್ಲಿ ಈ ರೀತಿ ಪಕ್ಷದ ಪ್ರಚಾರ ಮತ್ತು ಪ್ರಸಾರ ಮಾಡುತ್ತಿರುವುದು ಸರಿಯಾದ ಮಾರ್ಗವೇ? ಇದರ ವಿರುದ್ಧ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ನಾನು ಆಗ್ರಹಿಸುತ್ತೇನೆ ಎಂದಿದ್ದಾರೆ.