ಬೆಂಗಳೂರು: ತವರು ಜಿಲ್ಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳಲಾಗದೆ ಮುಜುಗರಕ್ಕೀಡಾಗಿ ಕುಗ್ಗಿಹೋಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಟಾನಿಕ್ ನೀಡಿದೆ. ನಾಯಕತ್ವ ಬದಲಾವಣೆ ಕೂಗಿನ ನಡುವೆ ಸಮಾಧಾನಕರ ಫಲಿತಾಂಶ ಬಂದಿರುವುದು ಸಿಎಂಗೆ ರಿಲೀಫ್ ನೀಡಿದಂತಾಗಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಜಯಗಳಿಸಿದೆ. ಕಳೆದ ಬಾರಿ 6 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 5 ಸ್ಥಾನವನ್ನು ಹೆಚ್ಚುವರಿಯಾಗಿ ಪಡೆದುಕೊಂಡು ಬೀಗುತ್ತಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರ ನಡೆದ ದೊಡ್ಡ ಚುನಾವಣೆ ಇದಾಗಿದ್ದು, ಪ್ರತಿಷ್ಠೆಯ ನಡುವೆ ನಡೆದ ಕದನದಲ್ಲಿ ಬೊಮ್ಮಾಯಿ ನಾಯಕತ್ವಕ್ಕೆ ಈ ಫಲಿತಾಂಶ ಹೊಸ ಹುರುಪು ನೀಡಿದೆ.
CM Bommai Campaign in council Election: ತಮ್ಮ ರಾಜಕೀಯ ಗುರು ಸಿಎಂ ಉದಾಸಿ ನಿಧನದಿಂದ ತೆರವಾದ ಹಾನಗಲ್ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಬೊಮ್ಮಾಯಿ ಸೋತಿದ್ದರು. ಮೊದಲ ಅಗ್ನಿ ಪರೀಕ್ಷೆಯಲ್ಲಿ ತವರು ಜಿಲ್ಲೆಯಲ್ಲೇ ಸಿಎಂ ನಾಯಕತ್ವಕ್ಕೆ ಸೋಲಾಯಿತು ಎಂದು ದಿಲ್ಲಿವರೆಗೂ ಕೂಗು ಮುಟ್ಟಿಸಲಾಯಿತು. ಇದರಿಂದ ಸ್ವತಃ ಸಿಎಂ ಬೊಮ್ಮಾಯಿ ಮುಜುಗರಕ್ಕೂ ಒಳಗಾಗಬೇಕಾಯಿತು. ವಾರಗಟ್ಟಲೇ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದರೂ ಕ್ಷೇತ್ರ ಕೈತಪ್ಪಿತ್ತು.
ಎರಡು ಕ್ಷೇತ್ರಕ್ಕೆ ನಡೆದಿದ್ದ ಉಪ ಸಮರದಲ್ಲಿ ಒಂದನ್ನಾದರೂ ಗೆದ್ದ ಸಮಾಧಾನ ಹೊಂದಿದ್ದ ಬೊಮ್ಮಾಯಿಗೆ ಪರಿಷತ್ ಸಮರ ಹೊಸ ಸವಾಲಾಗಿತ್ತು. ತವರು ಜಿಲ್ಲೆಯ ಸೋಲಿನಿಂದ ಹೊರಬಂದು ನಾಯಕತ್ವ ಸಾಬೀತುಪಡಿಸುವ ಹೊಣೆಗಾರಿಕೆಯೊಂದಿಗೆ ಪರಿಷತ್ ಸಮರದ ಅಖಾಡಕ್ಕೆ ಸಿಎಂ ಬೊಮ್ಮಾಯಿ ಧುಮುಕಿದ್ದರು.
ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ದೂರವಿಡದೆ ವ್ಯವಸ್ಥಿತವಾಗಿ ಪ್ರಚಾರಕ್ಕೆ ಬಳಸಿಕೊಂಡು ಉಪಸಮರದಲ್ಲಾದ ಲೋಪ ಸರಿಪಡಿಸಿಕೊಂಡು ಸಾಮೂಹಿತ ನಾಯಕತ್ವದೊಂದಿಗೆ ಪ್ರಚಾರ ನಡೆಸಿದ್ದರ ಫಲವಾಗಿ 11 ಸ್ಥಾನಗಳು ಬಿಜೆಪಿ ಕೈಸೇರಿವೆ. ಐದು ಕ್ಷೇತ್ರಗಳು ಹೆಚ್ಚುವರಿಯಾಗಿ ಸಿಕ್ಕಿದ್ದು ಬೊಮ್ಮಾಯಿಗೆ ಸ್ವಲ್ಪ ಸಮಾಧಾನವನ್ನೂ ತಂದಿದ್ದು, ನಾಯಕತ್ವ ಪ್ರಶ್ನೆ ಮಾಡುತ್ತಿದ್ದವರಿಗೆ ಉತ್ತರವನ್ನೂ ಫಲಿತಾಂಶದ ಮೂಲಕವೇ ಅವರು ನೀಡಿದ್ದಾರೆ.
CM Bommai reaction on leadership: ಹೈಕಮಾಂಡ್ ನಾಯಕರಲ್ಲಿ ಉತ್ತಮ ಅಭಿಪ್ರಾಯ ಮೂಡಿಸಿಕೊಳ್ಳುವಲ್ಲಿ ಸಫಲರಾಗಿರುವ ಬೊಮ್ಮಾಯಿಗೆ ರಾಜ್ಯದಲ್ಲೇ ಅಡೆತಡೆ ಎದುರಾಗುತ್ತಿದೆ. ಸ್ವಪಕ್ಷೀಯ ನಾಯಕರೇ ನಾಯಕತ್ವ ಕುರಿತ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಹಾನಗಲ್ ಸೋಲು ಬೊಮ್ಮಾಯಿ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು. ಈಗ ಪರಿಷತ್ ಚುನಾವಣಾ ಫಲಿತಾಂಶ ಅಕ್ಷರಶಃ ಸಿಎಂ ಬೊಮ್ಮಾಯಿಗೆ ಟಾನಿಕ್ ನೀಡಿದ್ದು, ಮುಂದಿನ ಚುನಾವಣಾ ನೇತೃತ್ವ ವಹಿಸುವ ಕುರಿತು ಇದ್ದ ಅಡೆತಡೆಗಳಿಗೆ ಪರಿಷತ್ ಫಲಿತಾಂಶದ ಮೂಲಕವೇ ಉತ್ತರ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂದು ದಾವಣಗೆರೆಯಲ್ಲಿ ಪ್ರಕಟಿಸಿದ್ದರು. ಇದು ರಾಜ್ಯದ ಹಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ತಮ್ಮ ತಮ್ಮದೇ ರೀತಿಯ ವ್ಯಾಖ್ಯಾನದೊಂದಿಗೆ ಬೊಮ್ಮಾಯಿ ನಾಯಕತ್ವ ಅಲ್ಲ ಎನ್ನುವ ವಾದ ಮುಂದಿಟ್ಟಿದ್ದರು. ಅದರ ನಡುವೆ ಹಾನಗಲ್ ಸೋಲು ಬೊಮ್ಮಾಯಿ ನಾಯಕತ್ವವನ್ನು ಪ್ರಶ್ನಿಸುವಂತೆ ಮಾಡಿತ್ತು. ಆದರೆ ಈಗ ಪರಿಷತ್ ಫಲಿತಾಂಶ ಉತ್ತರ ನೀಡಿದೆ. ನಾಯಕತ್ವ ಪ್ರಶ್ನಿಸಿದಂತೆ ಮಾಡಿದೆ.
ವಿಪಕ್ಷಗಳಲ್ಲಿರುವ ಅಸ್ತ್ರಗಳು: ಸದ್ಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈಗಾಗಲೇ ಕಮೀಷನ್ ದಂಧೆ ಆರೋಪ, ಬಿಟ್ ಕಾಯಿನ್ ಹಗರಣ ಸೇರಿದಂತೆ ಸಾಲು ಸಾಲು ಅಸ್ತ್ರಗಳು ಪ್ರತಿಪಕ್ಷದ ಬಳಿ ಇವೆ. ಪರಿಷತ್ ಸಮರದಲ್ಲಿ ಕಡಿಮೆ ಸ್ಥಾನಗಳು ಬಂದಿದ್ದಲ್ಲಿ ಪ್ರತಿ ಪಕ್ಷಗಳಿಗೆ ಸ್ವತಃ ಸಿಎಂ ಸೇರಿ ಬಿಜೆಪಿ ಆಹಾರವಾಗಬೇಕಿತ್ತು. ಬಿಜೆಪಿ ಪರ ಜನರ ಒಲವಿಲ್ಲ, ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ತಿರುಗಿಬೀಳುತ್ತಿದ್ದವು. ಆದರೆ ಸಿಎಂ ಬೊಮ್ಮಾಯಿ ಸರ್ಕಾರ ಇದರಿಂದ ಪಾರಾಗಿದೆ. ಹೆಚ್ಚುವರಿ ಸ್ಥಾನ ಗೆದ್ದು ಪರಿಷತ್ನಲ್ಲಿ ಬಹುಮತದ ಸಂಖ್ಯೆ ಅಂಚಿಗೆ ಬಂದು ನಿಂತಿದೆ. ಹಾಗಾಗಿ ಬೊಮ್ಮಾಯಿ ಸರ್ಕಾರಕ್ಕೆ ಜನ ಬೆಂಬಲವಿಲ್ಲ ಎನ್ನುವ ಟೀಕೆ ಎದುರಾಗುವ ಆತಂಕವಿಲ್ಲದಂತಾಗಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಂತರ ನಡೆದ ಮೊದಲ ಉಪ ಸಮರದಲ್ಲಿ ತವರಿನಲ್ಲಿ ಸೋತು ಕುಗ್ಗಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಪರಿಷತ್ ಚುನಾವಣಾ ಫಲಿತಾಂಶ ನಿಟ್ಟುಸಿರು ಬಿಡುವಂತೆ ಮಾಡಿದೆ. ನಾಯಕತ್ವ ಪ್ರಶ್ನೆ ಮಾಡಿದ್ದವರಿಗೂ ಉತ್ತರದಂತೆ ಫಲಿತಾಂಶ ಬಂದಿದ್ದು ಸಿಎಂಗೆ ಹೊಸ ಹುರುಪು ಮೂಡಿಸಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆ: ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ಜೆಡಿಎಸ್ ವಿಫಲ, ದಳಪತಿಗಳು ಎಡವಿದ್ದೆಲ್ಲಿ?