ಬೆಂಗಳೂರು: ಕೆಲ ವಿಭಾಗಗಳಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ಪಾಲಿಕೆ ಅಧಿಕಾರಿಗಳು ಮತ್ತು ಕಚೇರಿಗಳ ಮೇಲೆ ಮೊದಲ ಬಾರಿಗೆ ಎಸಿಬಿ ನಡೆಸಿದ ಬೃಹತ್ ದಾಳಿಯಲ್ಲಿ ಕೋಟಿಗಟ್ಟಲೆ ಭ್ರಷ್ಟಾಚಾರ ಬಯಲಿಗೆ ಬಂದಿದೆ. ಸರ್ಕಾರ ಮತ್ತು ಪಾಲಿಕೆಗೆ 500 ಕೋಟಿ ರೂ. ಗಳ ವಂಚನೆಯಾಗಿರುವುದು ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ.
ಎಸಿಬಿ ಅಧಿಕಾರಿಗಳು ಸೋಮವಾರದಂದು ( ಶನಿವಾರ ಭಾನುವಾರದ ರಜೆ ಹೊರತಾಗಿ) ಎರಡನೇ ದಿನದ ದಾಳಿ ನಡೆಸಿ ಹಲವು ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂದು ಎಸಿಬಿ (ಅಪರಾಧ ಪತ್ತೆ ದಳ) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಟಿಡಿಆರ್( ಟ್ರಾನ್ಸ್ಫರ್ ಆಫ್ ಡೆವಲಪ್ಮೆಂಟ್ ರೈಟ್ಸ್) ವಿಭಾಗದಲ್ಲಿ ಬೃಹತ್ ಹಗರಣ ಬಯಲಿಗೆ ಬಂದಿದೆ. ಡಿಆರ್ಸಿ ( ಡೆವಲಪ್ಮೆಂಟ್ಸ್ ರೈಟ್ಸ್ ಸರ್ಟಿಫಿಕೇಟ್) ಕಡತಗಳು ಸೃಷ್ಟಿಸಿ ಕಟ್ಟಡಗಳನ್ನ ಎರಡು - ಮೂರು ಮಹಡಿ ಇರುವ ಕಟ್ಟಡ ಎಂದು ನಮೂದಿಸಲಾಗಿದೆ. ಹೆಚ್ಚು ವಿಸ್ತೀರ್ಣದ ಜಾಗವೆಂದು ಡಿ.ಆರ್.ಸಿ ನೀಡಿ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ. ಬಹುರಾಷ್ಟ್ರೀಯ ಕಂಪನಿಗಳು, ಖಾಸಗಿ ಕಂಪನಿಗಳು, ಮಧ್ಯವರ್ತಿಗಳು, ಭೂಮಾಲೀಕರ ಜೊತೆಗೆ ಅಧಿಕಾರಿಗಳು ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಫ್ರಾಡ್ ಮಾಡಲಾಗಿದೆ. ನಿಜವಾದ ಭೂಮಾಲೀಕರಿಂದ ಡಿ.ಆರ್.ಸಿ ಸಂಬಂಧ ಅರ್ಜಿ ಸ್ವೀಕರಿಸದೇ ಅನರ್ಹರಿಂದ ಸ್ವೀಕರಿಸಿ ಹಣವನ್ನು ಕೊಳ್ಳೆ ಹೊಡೆಯಲಾಗಿದೆ ಎಂದು ಹೇಳಿದೆ.
ಕಾನೂನೂ ಬಾಹಿರವಾಗಿ ಜಾಗ ಸ್ವಾಧೀನದ ಪ್ರಮಾಣ ಪತ್ರ: ಹಲವಾರು ವರ್ಷಗಳಿಂದ ಬಿಬಿಎಂಪಿ ಅಧಿಕಾರಿಗಳು ನಿರ್ದಿಷ್ಟ ಕಂಪನಿಗಳು, ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳಿಂದ ಬೇಕಂತಲೇ ಕಂದಾಯ ಸಂಗ್ರಹಿಸಿಲ್ಲ. ಕಾನೂನು ಬಾಹಿರವಾಗಿ ಜಾಗ ಸ್ವಾಧೀನಪಡಿಸಿಕೊಳ್ಳಲು ಪ್ರಮಾಣಪತ್ರ ನೀಡಿ ಸರ್ಕಾರಕ್ಕೆ ನೂರಾರು ಕೋಟಿ ರೂ. ನಷ್ಟ ಉಂಟು ಮಾಡಲಾಗಿದೆ ಎಂದು ತಿಳಿಸಿದೆ.
ಬೇರೆ ಜಾಗದ ಫೋಟೋ ತೆಗೆದು ಸುಳ್ಳು ದಾಖಲೆ ಸೃಷ್ಟಿ: ರಸ್ತೆ ಅಗಲೀಕರಣದ ಹೆಸರಲ್ಲಿ ಬೇರೆ ಬೇರೆ ಜಾಗದ ಫೋಟೋ ತೆಗೆದು ಸುಳ್ಳು ದಾಖಲೆ ಸೃಷ್ಟಿಸಿ ಹಣ ದೋಚಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಬಿಬಿಎಂಪಿ ಕಚೇರಿಗಳ ಮೇಲೆ ಮತ್ತೆ ಎಸಿಬಿ ದಾಳಿ, ದಾಖಲೆಗಳ ಪರಿಶೀಲನೆ
ಇಂಜಿನಿಯರಿಂಗ್ ವಿಭಾಗದಲ್ಲಿ ಆಕ್ರಮ: ಇಂಜಿನಿಯರಿಂಗ್ ವಿಭಾಗದಲ್ಲಿ ಕಾಮಗಾರಿ ನಡೆಯದಿದ್ದರೂ ಕಾಮಗಾರಿ ನಡೆದಿರುವಂತೆ ತೋರಿಸಿ ಬಿಲ್ ಮಂಜೂರು ಮಾಡಲಾಗಿದೆ. ಟೆಂಡರ್ ಮಾನದಂಡ ಅನುಸರಿಸದೇ ಕಳಪೆ ಕಾಮಗಾರಿ ನಡಸಿ ಅನುಮೋದನೆಗಿಂತ ಹೆಚ್ಚಿನ ಮೊತ್ತದ ಬಿಲ್ಗಳನ್ನು ಸೃಷ್ಟಿಸಿ ಹಣ ಪಡೆಯಲಾಗಿದೆ ಎಂದು ಅಪರಾಧ ಪತ್ತೆ ದಳ ಮಾಹಿತಿ ನೀಡಿದೆ.