ಬೆಂಗಳೂರು: ಸರಿಯಾದ ಚಿಕಿತ್ಸೆ ಸಿಕ್ಕಿಲ್ಲವೆಂಬ ಭಯದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ ವ್ಯಕ್ತಿ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್ನ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.
466 ನೇ ಸಂಖ್ಯೆಯ ಸೋಂಕಿತ ಆತ್ಮಹತ್ಯೆಗೆ ಶರಣಾಗಿರುವ ರೋಗಿ. ನಗರದಲ್ಲಿ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದ ಈತ ಕಳೆದ ನಾಲ್ಕು ವರ್ಷದಿಂದ ಕಿಡ್ನಿ ವೈಫಲ್ಯದ ಸಮಸ್ಯೆ ಎದುರಿಸುತ್ತಿದ್ದ. ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿ ಉಸಿರಾಟದ ತೊಂದರೆ ಅನುಭವಿಸಿದ್ದ. ಹೀಗಾಗಿ ಈತನನ್ನು ಆರೋಗ್ಯ ಇಲಾಖೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಸೋಂಕಿತನ ಕುಟುಂಬಸ್ಥರನ್ನು ಹೋಟೆಲ್ ಕ್ವಾರಂಟೈನ್ಗೆ ಕಳುಹಿಸಿತ್ತು.
ಇಂದು ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಆರೋಪಿಸಿ ವಿಕ್ಟೋರಿಯಾ ಆಸ್ಪತ್ರೆಯ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಕೊರೊನಾ ಸೋಂಕಿತ ಆಗಿರುವ ಹಿನ್ನೆಲೆ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಜನರನ್ನು ನಿಯಂತ್ರಿಸಲಾಗಿದೆ. ಯಾರನ್ನೂ ಹತ್ತಿರ ಬಿಡದೆ ಏರಿಯಾ ಬ್ಲಾಕ್ ಮಾಡಿ ವಿವಿ ಪುರಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.