ಬೆಂಗಳೂರು: ಪೂರ್ವ ಮುಂಗಾರು ಮಳೆ ನಗರದಲ್ಲಿ ಎರಡು ದಿನಕ್ಕೊಮ್ಮೆ ಸುರಿಯುತ್ತಿದ್ದು, ಇದರಿಂದ ಸಹಜವಾಗಿ ಜನರು ಮಳೆ ಬಂದರೆ ಕೊರೊನಾ ಇನ್ನೂ ಹೆಚ್ಚಾಗಬಹುದು ಎಂಬ ಭೀತಿಯಲ್ಲಿದ್ದಾರೆ. ಆದರೆ ಮಳೆಗೂ ಕೊರೊನಾಗೂ ಸಂಬಂಧ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಮಳೆಗೂ, ಕೊರೊನಾ ಪ್ರಕರಣ ಹೆಚ್ಚಾಗುವುದಕ್ಕೂ ನೇರ ಸಂಬಂಧ ಇಲ್ಲ. ಈ ಬಗ್ಗೆ ಇನ್ನಷ್ಟೇ ಅಧ್ಯಯನಗಳು ನಡೆಯಬೇಕಿದೆ ಎಂದರು. ಸಾಮಾನ್ಯ ಕೆಮ್ಮು ,ಜ್ವರ ಬಂದರೂ ಜನ ಪರೀಕ್ಷೆ ಮಾಡಿಕೊಳ್ಳಬಹುದು. ಇನ್ನು ಮಳೆಯಿಂದಾಗಿ ನಗರದಲ್ಲಿ ಹಾನಿಯುಂಟಾದ ಸ್ಥಳಗಳಿಗೆ ಮೇಯರ್ ಹಾಗೂ ಆಯುಕ್ತರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ರಸ್ತೆಗಳಲ್ಲಿನ ನೀರು, ಬಿದ್ದ ಮರ ತೆರವು ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಶಾಂತಲಾ ನಗರ ವಾರ್ಡ್-111ರ ವ್ಯಾಪ್ತಿಯ ಹೇಯ್ಸ್ ರಸ್ತೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿ(ಬೇಸ್ಮೆಂಟ್)ಯಲ್ಲಿ ಮಳೆ ನೀರು ತುಂಬಿರುವ ಪರಿಣಾಮ ರಸ್ತೆ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ತಪಾಸಣೆ ಬಳಿಕ ಸಭೆ ನಡೆಸಿ, ಮಳೆಗಾಲದಲ್ಲಿ ಕೋರಮಂಗಲ, ಹೆಚ್.ಎಸ್.ಆರ್ ಲೇಔಟ್ ಪ್ರದೇಶಗಳಲ್ಲಿ ಮಳೆ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಾಗೂ ನಿಗದಿತ ಸಮಯದಲ್ಲಿ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚಿಸಲಾಯಿತು.
ನಗರದಲ್ಲಿ ಸುರಿದ ಮಳೆಯಿಂದ 8 ಮರಗಳು ಧರೆಗುರುಳಿದ್ದು, ಜೀವನ್ ಭೀಮಾ ನಗರದಲ್ಲಿ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡಿದೆ. ಅಲ್ಲದೆ ಪ್ಯಾಲೇಸ್ ರಸ್ತೆಯ ಮೇಖ್ರಿ ವೃತ್ತ, ಹೈಗ್ರೌಂಡ್, ಶ್ರೀರಾಮ ಮಂದಿರದ ಸಿಟಿ ಏರಿಯಾ(ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ), ಬಸವೇಶ್ವರ ನಗರದ ಎಸ್.ಬಿ.ಐ ಕಾಲೋನಿ, ವೈಯ್ಯಾಲಿ ಕಾವಲ್, ಬಾಗಲೂರು ಲೇಔಟ್, ಕೋರಮಂಗಲ 6ನೇ ಬ್ಲಾಕ್ನಲ್ಲಿ ತಲಾ ಒಂದು ಮರ ಧರೆಗುರುಳಿವೆ. ಪಾಲಿಕೆ ಅರಣ್ಯ ವಿಭಾಗದ ತಂಡವು ಸ್ಥಳಕ್ಕೆ ತೆರಳಿ ಬಿದ್ದಿರುವ ಮರಗಳನ್ನು ತೆರವುಗೊಳಿಸಿದೆ.