ಬೆಂಗಳೂರು: ಬಿಬಿಎಂಪಿಯ ಜೆ.ಪಿ.ನಗರದ ಮಹಿಳಾ ಸಹಕಂದಾಯ ಅಧಿಕಾರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಪಡೆಯಲು ನಗರದೆಲ್ಲೆಡೆ ಪರದಾಡಿದ್ದಾರೆ. ಚಿಕಿತ್ಸೆ ಸಿಗದಿರುವ ಬಗ್ಗೆ ಸದ್ಯ ಆಸ್ಪತ್ರೆಯಿಂದಲೇ ವಿಡಿಯೋ ಮಾಡಿರುವ ಅವರು, ತಾವು ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ಚಳಿ, ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದೆ. ಕಳೆದ ಐದು ದಿನಗಳ ಹಿಂದೆ ಚಿಕಿತ್ಸೆಗಾಗಿ ಯಾವ ಖಾಸಗಿ ಆಸ್ಪತ್ರೆಗೆ ಹೋದರೂ ಯಾವ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡಿಲ್ಲ. ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ವಾಪಸ್ ಕಳುಹಿಸಿದ್ದಾರೆ.
ರಾಮಯ್ಯ ಆಸ್ಪತ್ರೆ ಹೋದಾಗ ಅಲ್ಲಿ ಚಿಕಿತ್ಸೆ ನೀಡಿಲ್ಲ. ನಂತರ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ಹೋದಾಗ ಅಲ್ಲಿಯೂ ಬೆಡ್ ಇಲ್ಲ ಅಂದಿದ್ದಾರೆ. ಎಷ್ಟೇ ಮನವಿ ಮಾಡಿದರೂ ಬೆಡ್ ನೀಡಿಲ್ಲ. ಕಳೆದ ಐದು ದಿನಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸುತ್ತಾಡಿದರೂ ಚಿಕಿತ್ಸೆ ಮಾತ್ರ ಸಿಕ್ಕಿಲ್ಲ. ಭಾನುವಾರ ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ನಿನ್ನೆ ಈ ಅಧಿಕಾರಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ನಂತರ ಬ್ಯಾಟರಾಯನಪುರದ ಪ್ರೋ ಲೈಫ್ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ.
ಕಳೆದ ಮೂರು ತಿಂಗಳಿಂದ ರಜೆಯಿಲ್ಲದೆ ಕೆಲಸ ಮಾಡಿ, ಕೋವಿಡ್ಗೆ ಗುರಿಯಾಗಿದ್ದೇನೆ. ಆದ್ರೆ ನಗರದಲ್ಲಿ ಅಧಿಕಾರಿಗಳಿಗೇ ಚಿಕಿತ್ಸೆ ಸಿಗದ ಪರಿಸ್ಥಿತಿ ಇದೆ. ಹೀಗಾಗಿ ಜನರು ಆದಷ್ಟು ಎಚ್ಚರಿಕೆಯಿಂದ ಇರಿ ಎಂದು ಮನವಿ ಮಾಡಿದ್ದಾರೆ.