ಬೆಂಗಳೂರು: ವ್ಯಕ್ತಿ ಪೂಜೆಗಿಂತ ಪಕ್ಷದ ಪೂಜೆ ಮುಖ್ಯ ಎಂಬ ನಿಟ್ಟಿನಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ರಚನೆಯಾಗಲು ಪಕ್ಷದ ತಂಡದೊಂದಿಗೆ ನಾವೆಲ್ಲ ಸಚಿವರು ಕಾರ್ಯನಿರ್ವಹಿಸುತ್ತೇವೆಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ಕೈಗೊಂಡ ಜನಪರ ಯೋಜನೆಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು, ಯುವಕರು, ಹಿರಿಯರು, ಅನುಭವಿಗಳು ಸೇರಿದಂತೆ ಉತ್ತಮವಾದ ಸಂಘಟನಾ ತಂಡವನ್ನು ರಚನೆ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಸದೃಢ ಮತ್ತು ಕ್ರಿಯಾಶೀಲ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಎಲ್ಲರಿಗೂ ಕೂಡ ಅಭಿನಂದಿಸುತ್ತೇನೆ. ಸಿಎಂ ನೇತೃತ್ವದಲ್ಲಿ ರಾಜ್ಯ ಸರ್ಕಾರ ಪ್ರವಾಹ, ಕೋವಿಡ್-19 ನಿರ್ವಹಣೆಯಲ್ಲಿ ಸದಾ ಉಸ್ತುವಾರಿ ಸಚಿವರುಗಳು, ಜನಪ್ರತಿನಿಧಿಗಳು, ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡುತ್ತಾ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಜೊತೆಗೆ ಕಷ್ಟದಲ್ಲಿರುವ ನಾಗರೀಕರ ಸಹಾಯಕ್ಕೆ ಧಾವಿಸಿ ಕೋಟ್ಯಂತರ ರೂಪಾಯಿ ಪ್ಯಾಕೇಜ್ಗಳನ್ನು ಘೋಷಿಸಿ ನೆರವಾಗಿದ್ದಾರೆ. ಈ ಮೂಲಕ ಆರ್ಥಿಕ ಚಟುವಟಿಕೆ ನಿಲ್ಲದಂತೆ ನೋಡಿಕೊಂಡು ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆ.
ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿರುವ ವಿಪಕ್ಷಗಳಿಗೆ ನೂತನ ಪದಾಧಿಕಾರಿಗಳು ಪಕ್ಷದ ವೇದಿಕೆಯಲ್ಲಿ ತಕ್ಕ ಮತ್ತು ಸಮರ್ಥ ರೀತಿಯಲ್ಲಿ ಉತ್ತರವನ್ನು ಕೊಡುವ ನಿಟ್ಟಿನಲ್ಲಿ ಅರ್ಹರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.