ಬೆಂಗಳೂರು: ಅಭಿವೃದ್ದಿ ಹೊಂದುತ್ತಿರುವ ನಮ್ಮ ಅರ್ಥ ವ್ಯವಸ್ಥೆಯಲ್ಲಿ ಕೃಷಿ ಸಾಲ ತನ್ನದೇ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ರಾಜ್ಯದಲ್ಲಿ ರೈತರ ಕೃಷಿ ಚಟುವಟಿಕೆ ಬಹುತೇಕ ಸಹಕಾರ ಸಾಲ ವ್ಯವಸ್ಥೆ ಮೇಲೆನೇ ಅವಲಂಬಿತವಾಗಿದೆ. ರಾಜ್ಯದಲ್ಲಿ ಕಳೆದ ವರ್ಷ ಮತ್ತು ಈ ವರ್ಷ ಸಹಕಾರ ಬ್ಯಾಂಕ್ಗಳ ಬೆಳೆ ಸಾಲದ ಗುರಿ ಸಾಧನೆ ಏನಿದೆ ಎಂಬ ಸಮಗ್ರ ವರದಿ ಇಲ್ಲಿದೆ.
ಕೃಷಿ ಉತ್ಪಾದನೆಗೆ ಸಾಲ ವ್ಯವಸ್ಥೆ ಅತಿ ಮುಖ್ಯವಾಗಿರುತ್ತದೆ. ಅದರಲ್ಲೂ ಸಹಕಾರ ಸಾಲ ಕೃಷಿ ಚಟುವಟಿಕೆಯ ಜೀವಾಳವಾಗಿದೆ. ರಾಜ್ಯದಲ್ಲಿ ಬಹುತೇಕ ರೈತರು ಸಹಕಾರ ಬ್ಯಾಂಕ್ಗಳ ಸಾಲವನ್ನೇ ನೆಚ್ಚಿಕೊಂಡಿರುವುದು. ಸಹಕಾರ ಬ್ಯಾಂಕ್ಗಳು ನೀಡುವ ಸಾಲದ ಮೇಲೆನೇ ರೈತರು ಕೃಷಿ ಉತ್ಪಾದನೆ ಅವಲಂಬಿತವಾಗಿದೆ. ಕಳೆದ ವರ್ಷ ಹಾಗೂ ಈ ವರ್ಷದ ಬೆಳೆ ಸಾಲದ ಗುರಿ ಸಾಧನೆಯಲ್ಲಿ ಸಹಕಾರ ಬ್ಯಾಂಕ್ಗಳು ಹಿನ್ನಡೆ ಕಂಡಿದೆ.
ಬೆಳೆ ಸಾಲದ ಪ್ರಗತಿ ಹೇಗಿದೆ...?
2019-20ರಲ್ಲಿ 24.80 ಲಕ್ಷ ರೈತರಿಗೆ 13,000 ಕೋಟಿ ರೂ. ಬೆಳೆ ಸಾಲ ವಿತರಿಸುವ ಗುರಿ ಹೊಂದಲಾಗಿತ್ತು. ಮಾರ್ಚ್ ಅಂತ್ಯದ ವೇಳೆಗೆ 22 ಲಕ್ಷ ರೈತರಿಗೆ 12987 ಕೋಟಿ ರೂ. ಬೆಳೆ ಸಾಲವನ್ನು ವಿತರಿಸಲಾಗಿದೆ ಎಂದು ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಅಂಕಿ ಅಂಶ ನೀಡಿದ್ದಾರೆ.
ಕಲಬುರಗಿ ಡಿಸಿಸಿ ಬ್ಯಾಂಕ್ 25% ಗಿಂತ ಕಡಿಮೆ ಸಾಲ ವಿತರಣೆ ಮಾಡಿದೆ. ಮೈಸೂರು, ಧಾರವಾಡ, ಶಿವಮೊಗ್ಗ, ಮಂಡ್ಯ, ಬೀದರ್, ಉ.ಕನ್ನಡ ಗುರಿಯ 90% ಗಿಂತ ಕಡಿಮೆ ಸಾಲ ವಿತರಿಸಲಾಗಿದೆ.
ಇನ್ನು ಮಧ್ಯಮಾವಧಿ ಬೆಳೆ ಸಾಲ ವಿತರಣೆಯಲ್ಲಿ 40 ಸಾವಿರ ರೈತರಿಗೆ 1,000 ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಲಾಗಿತ್ತು. ಆದರೆ, 28 ಸಾವಿರ ರೈತರಿಗೆ ಮಾತ್ರ 591 ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ. ಈ ಪೈಕಿ ಕಲಬುರಗಿ, ಹಾಸನ, ಬೀದರ್, ಮೈಸೂರು, ವಿಜಯಪುರ, ರಾಯಚೂರು ಗುರಿಯ 50% ಗಿಂತ ಕಡಿಮೆ ಸಾಲ ವಿತರಿಸಿದೆ.
ಬೆಳೆ ಸಾಲ ವಿತರಣೆ 2020-21ರಲ್ಲಿ 24.50 ಲಕ್ಷ ರೈತರಿಗೆ 14,500 ಕೋಟಿ ರೂ. ಬೆಳೆ ಸಾಲ ವಿತರಣೆ ಗುರಿ ಹೊಂದಲಾಗಿದೆ. ಜುಲೈ ಅಂತ್ಯಕ್ಕೆ 9.33 ಲಕ್ಷ ರೈತರಿಗೆ 6146 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ.
ಇನ್ನು 40 ಸಾವಿರ ರೈತರಿಗೆ 800 ಕೋಟಿ ಮಧ್ಯಮಾವಧಿ ಸಾಲ ವಿತರಣೆ ಗುರಿ ಹೊಂದಲಾಗಿದೆ. ಈ ಪೈಕಿ 7 ಸಾವಿರ ರೈತರಿಗೆ 143 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ.
ಪ.ಜಾತಿ ಮತ್ತು ಪ.ಪಂಗಡಕ್ಕೆ ಬೆಳೆ ಸಾಲ...
5.50 ಲಕ್ಷ ರೈತರಿಗೆ 2500 ಕೋಟಿ ರೂ. ಬೆಳೆ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಜುಲೈ ಅಂತ್ಯಕ್ಕೆ 1.10 ಲಕ್ಷ ರೈತರಿಗೆ ರೂ.842 ಕೋಟಿಗಳ ಬೆಳೆ ಸಾಲ ವಿತರಣೆ ಮಾಡಲಾಗಿದೆ. ರಾಯಚೂರು, ಕಲಬುರ್ಗಿ, ಬಳ್ಳಾರಿ, ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ ಜಿಲ್ಲೆಯಲ್ಲಿರುವ ಶೇಕಡ ವರ್ಗವಾರು ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಗುರಿ ನಿಗದಿ ಮಾಡಲಾಗಿದೆ.
2019-20 ರಲ್ಲಿ ಯಾದಗಿರಿ, ಚಾಮರಾಜನಗರ, ಮೈಸೂರು, ಹಾಸನ, ಚಿಕ್ಕಮಗಳೂರು, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿರುವ ಶೇಕಡ ವರ್ಗವಾರು ಪ್ರಮಾಣಕ್ಕಿಂತ (ಶೇ.10 ರ ವ್ಯತ್ಯಾಸ) ಕಡಿಮೆ ಪ್ರಮಾಣದಲ್ಲಿ ಸಾಲ ವಿತರಣೆ ಮಾಡಲಾಗಿದೆ.
2019-20 ರಲ್ಲಿ ಈ ವರ್ಗಕ್ಕೆ ಸಾಲ ವಿತರಿಸದೇ ಬಡ್ಡಿ ಸಹಾಯಧನದ ಬಿಲ್ಲುಗಳು ಇಲ್ಲದೇ ಇರುವುದರಿಂದ 155 ಕೋಟಿ ರೂ. ಸರ್ಕಾರಕ್ಕೆ ಆಧ್ಯರ್ಪಣೆ ಮಾಡಲಾಗಿತ್ತು.
ಹೊಸ ಸದಸ್ಯರಿಗೆ ಬೆಳೆ ಸಾಲ ವಿತರಣೆ...
2020-21ರಲ್ಲಿ 4.50 ಲಕ್ಷ ರೈತರಿಗೆ ರೂ.2500 ಕೋಟಿಗಳ ಬೆಳೆ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಜುಲೈ ಅಂತ್ಯಕ್ಕೆ 0.94 ಲಕ್ಷ ರೈತರಿಗೆ ರೂ.626 ಕೋಟಿಗಳ ಬೆಳೆ ಸಾಲ ವಿತರಿಸಲಾಗಿದೆ ಎಂದು ಸಹಕಾರ ಇಲಾಖೆ ಮಾಹಿತಿ ನೀಡಿದೆ.
ಯಾದಗಿರಿ, ಹಾವೇರಿ, ಕಲಬುರ್ಗಿ, ಗದಗ, ಧಾರವಾಡ, ಬೆಂಗಳೂರು, ಬೀದರ್, ಚಿತ್ರದುರ್ಗ, ರಾಮನಗರ ಶೇ.25ರ ಗುರಿಗಿಂತ ಕಡಿಮೆ ಸಾಲ ವಿತರಿಸಲಾಗಿದೆ.