ಬೆಂಗಳೂರು : ನಗರ ವಿಭಾಗದಲ್ಲಿ ಮೊದಲ ಗುತ್ತಿಗೆ ನೀಡಲಾದ ಕಾರ್ಗೋ ಪಾರ್ಸೆಲ್ ಎಕ್ಸ್‌ಪ್ರೆಸ್ ರೈಲಿನ ಆರಂಭಕ್ಕೆ ಶನಿವಾರ ಯಶವಂತಪುರ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಅನಿಲ್ ಪವಿತ್ರನ್, ಪ್ರಧಾನ ಮುಖ್ಯ ನಿರ್ವಹಣಾ ವ್ಯವಸ್ಥಾಪಕ ಹರಿ ಶಂಕರ್ ವರ್ಮಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್, ಎವಿಜಿ ಲಾಜಿಸ್ಟಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಗುಪ್ತಾ ಉಪಸ್ಥಿತರಿದ್ದರು. ಈ ರೈಲು ಬೆಂಗಳೂರಿನ ಯಶವಂತಪುರದಿಂದ ನವದೆಹಲಿಯ ಓಖ್ಲಾ ನಿಲ್ದಾಣದವರೆಗೆ ಸಂಚರಿಸಲಿದೆ.
- ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲು(ಪಿಸಿಇಟಿ) ಭಾರತೀಯ ರೈಲ್ವೆಯ ಒಂದು ಉಪಕ್ರಮವಾಗಿದ್ದು, 6 ವರ್ಷಗಳ ಅವಧಿಗೆ ಆಗುವಷ್ಟು ಸುತ್ತು ಪ್ರಯಾಣದ ಆಧಾರದಲ್ಲಿ ಗುತ್ತಿಗೆಗೆ ನೀಡಲಾಗಿದೆ.
- ಪಾರ್ಸೆಲ್ ರೈಲಿನ ಕನಿಷ್ಠ ಸಂಯೋಜನೆ 15 ಪಾರ್ಸೆಲ್ ವ್ಯಾನ್‌ಗಳು ಮತ್ತು 01 ಬ್ರೇಕ್ ವ್ಯಾನ್ ಆಗಿದೆ. ಹೀಗಾಗಿ 353 ಟನ್‌ಗಳಷ್ಟು ವಸ್ತುಗಳನ್ನು ಒಂದೇ ಬಾರಿಗೆ ಸಾಗಿಸಬಹುದು.
- ಪಿಸಿಇಟಿಗಳು ತಿಂಗಳಿಗೆ ಕನಿಷ್ಠ ಎರಡು ಬಾರಿ ಸಾಗಣೆ ನಿರ್ವಹಿಸಬೇಕಾಗುತ್ತದೆ. ಪಿಸಿಇಟಿಗಳ ಸಾರಿಗೆ ನಿರ್ವಹಣೆ ವೇಳಾಪಟ್ಟಿಯ ಪ್ರಕಾರ ಇರುವುದರಿಂದ ಗ್ರಾಹಕರು ತಮ್ಮ ಪಾರ್ಸೆಲ್‌ಗಳನ್ನು ಕಡಿಮೆ ಸಮಯದಲ್ಲಿ ಶೀಘ್ರವಾಗಿ ಸಾಗಿಸಲು ಸಾಧ್ಯವಾಗುತ್ತದೆ.
- ಒಪ್ಪಂದದ ಅವಧಿಯ ಮೊದಲ 3 ವರ್ಷಗಳಲ್ಲಿ ಸರಕು ಸಾಗಣೆಯಲ್ಲಿ ಯಾವುದೇ ಏರಿಕೆ ಇರುವುದಿಲ್ಲ ಮತ್ತು 4ನೇ ವರ್ಷದಿಂದ ಶೇಕಡಾ 10ರಷ್ಟು ಏರಿಕೆ ಆಗಲಿದೆ.
- ಸ್ಪರ್ಧಾತ್ಮಕ ದರಗಳು ಮತ್ತು ಯಾವುದೇ ಬಜೆಟ್ ಹೆಚ್ಚಳವಿಲ್ಲದೆ, ರೈಲ್ವೆ ಮತ್ತು ಗುತ್ತಿಗೆದಾರರು ಜಂಟಿಯಾಗಿ ಪಾರ್ಸೆಲ್ ಸಾಗಣೆಯನ್ನು ರಸ್ತೆ ಸಾರಿಗೆಯಿಂದ ರೈಲ್ವೆ ಕಡೆಗೆ ಆಕರ್ಷಿಸಲು ಸಾಧ್ಯವಾಗುತ್ತದೆ.
- ಈ ಮೂಲಕ ರೈಲ್ವೆ ಪಾರ್ಸೆಲ್ ಸಾಮರ್ಥ್ಯದ ಬಳಕೆಯನ್ನು ಸುಧಾರಿಸಲು ಮತ್ತು ದೇಶಾದ್ಯಂತ ಪೂರೈಕೆ ಸರಪಳಿಗೆ ಪ್ರಮುಖ ಉತ್ತೇಜನವನ್ನು ನೀಡಲು ಸಾಧ್ಯವಾಗುತ್ತದೆ.
- ನೈಋತ್ಯ ರೈಲ್ವೆ, ಬೆಂಗಳೂರು ವಿಭಾಗ ಪಿಸಿಇಟಿಯನ್ನು ಮೆ.ಎವಿಜಿ ಲಾಜಿಸ್ಟಿಕ್ಸ್ ನಿಯಮಿತ ಸಂಸ್ಥೆಗೆ ಬೆಂಗಳೂರಿನಿಂದ ದೆಹಲಿಗೆ ಮತ್ತು ಹಿಂದಕ್ಕೆ ವಾರಕ್ಕೆ 2 ಸುತ್ತಿನ ಪ್ರಯಾಣವನ್ನು ಗುತ್ತಿಗೆ ನೀಡಿದೆ. 6 ವರ್ಷಗಳ ಒಪ್ಪಂದದ ಒಟ್ಟು ಮೌಲ್ಯವು ರೂ.241 ಕೋಟಿ ರೂಪಾಯಿಗಳಾಗಿದೆ.
ಇದನ್ನೂ ಓದಿ: ಮುಂಬೈ ಕರ್ನಾಟಕ ಪ್ರಾಂತ್ಯಕ್ಕೆ ಕಿತ್ತೂರು - ಕರ್ನಾಟಕ ನಾಮಕರಣ ವಿಚಾರ: ಮುಂದಿನ ಸಂಪುಟದಲ್ಲಿ ನಿರ್ಧಾರ ಎಂದ ಸಿಎಂ