ಬೆಂಗಳೂರು: ಲಡಾಖ್ನ ಭಾರತ-ಚೀನಾ ಗಡಿಯಲ್ಲಿ ಶತ್ರು ರಾಷ್ಟ್ರದ ಜೊತೆ ಸೆಣಸಾಡುವಾಗ, ವೀರ ಮರಣವನ್ನಪ್ಪಿದ ಯೋಧರಿಗೆ ಯುವ ಕಾಂಗ್ರೆಸ್ ನಾಯಕರು ಶ್ರದ್ಧಾಂಜಲಿ ಸಲ್ಲಿಸಿ ಚೀನಾ ವಿರುದ್ಧ ಪ್ರತಿಭಟನೆ ನಡೆಸಿದರು.
ನಗರದ ಮೌರ್ಯ ವೃತ್ತದಲ್ಲಿ ಯುವ ಕಾಂಗ್ರೆಸ್ ನಾಯಕ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಚೀನಾ ಅಧ್ಯಕ್ಷರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಯುವ ಕಾಂಗ್ರೆಸ್ ನಾಯಕ ಮನೋಹರ್ ಮಾತನಾಡಿ, ಚೀನಾ ಭಾರತಕ್ಕೆ ಮಿತ್ರದ್ರೋಹ ಮಾಡಿದೆ. ಕಳೆದ 45 ವರ್ಷಗಳಿಂದ ಯಾವುದೇ ಸಾವು-ನೋವು ಆಗದ ರೀತಿ ಭಾರತ ನಡೆದುಕೊಂಡು ಬಂದಿದೆ. ಆದರೆ ನಮ್ಮ ದೇಶದ ಗಡಿಯೊಳಗೆ ನುಸುಳಿ ಭಾರತೀಯ ಸೈನಿಕರನ್ನು ಹತ್ಯೆಗೈಯುವ ಮೂಲಕ ಚೀನಾ ಸೇಡಿನ ರಾಜಕೀಯ ಮಾಡಿದೆ ಎಂದು ಕಿಡಿಕಾರಿದರು.
ನಮ್ಮ ಯೋಧರು ಹುತಾತ್ಮರಾಗುವ ಜೊತೆಗೆ ಚೀನಾ ದೇಶದ ಯೋಧರನ್ನು ಸಾಯಿಸುವ ಮೂಲಕ ಧೈರ್ಯ, ಸಾಹಸ ಮೆರೆದಿದ್ದಾರೆ. ಈ ಮೂಲಕ ನಮ್ಮದು ಬಲಿಷ್ಠ ರಾಷ್ಟ್ರ ಎಂಬ ಸಂದೇಶ ರವಾನೆಯಾಗಿದ್ದು, ಚೀನಾ ಕುತಂತ್ರಿ ರಾಷ್ಟ್ರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ನೇಪಾಳ, ಪಾಕಿಸ್ತಾನ ಮತ್ತು ಇತರೆ ರಾಷ್ಟ್ರಗಳಿಗೆ ಕುಮ್ಮಕ್ಕು ನೀಡಿ, ಭಾರತದ ಮೇಲೆ ಯುದ್ಧ ಸಾರುವ ಕುತಂತ್ರವನ್ನು ಚೀನಾ ರೂಪಿಸಿದೆ. ದೇಶದ ಗಡಿ ಭಾಗದಲ್ಲಿ ನಡೆದಿರುವ ಸಂಘರ್ಷ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟಕ್ಕೆ ಹೋಗುವ ಸಾಧ್ಯತೆಯಿದೆ. ಚೀನಾ ಕೂಡಲೇ ಭಾರತದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.