ಬೆಂಗಳೂರು: ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ಪ್ರತಿಭಟನೆ ಮಾಡಿಯೇ ಪಡೆಯಬೇಕಾದ ಅನಿವಾರ್ಯತೆ ಇದೆಯಾ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಕ್ಕಳಿಗೆ ಶೂ, ಸಾಕ್ಸ್ ತಲುಪಿಲ್ಲ. ಸಮವಸ್ತ್ರ ಪ್ರತಿಭಟನೆ ಮಾಡಿ ಪಡೆಯಬೇಕಾ? ಕೊಡ್ತೇವೆ ಅಂತ ಘೋಷಣೆ ಮಾಡಿದ್ದೀರಿ. ಈಗ ಇದರಲ್ಲೂ ಶೇ 40ರಷ್ಟು ಕಮಿಷನ್ ಹೊಡೆಯಬೇಡಿ ಎಂದು ಖರ್ಗೆ ಕಿಡಿಕಾರಿದ್ದಾರೆ.
ನಾವು ಹಿಂದೆ ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರನ್ನು ತಮ್ಮ ಸ್ವಂತ ಊರುಗಳಿಗೆ ಕಳಿಸಿಕೊಡಲು ಸರ್ಕಾರಕ್ಕೆ 1 ಕೋಟಿ ಚೆಕ್ ಕೊಡಲು ಹೋಗಿದ್ದೆವು. ಬಸ್ ಶುಲ್ಕವನ್ನು ಅವರ ಮುಖಕ್ಕೆ ಎಸೆದಿದ್ದೆವು. ಆಗ ಅವರೇ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದ್ರು. ಈಗ ಮಕ್ಕಳಿಗೆ ಶೂ, ಸಾಕ್ಸ್ ಕೊಡೋಕೆ ಆಗ್ತಿಲ್ಲ.
ನಾಗೇಶ್ ಅವರೇ ನೀವು ಶಿಕ್ಷಣ ಸಚಿವರು, ನೀವೇ ಕೊಟ್ಟಿರುವ ಮಾಹಿತಿಯಂತೆ ಮಧ್ಯಾಹ್ನದ ಊಟ ಮಾಡಿದ್ದು ಮಕ್ಕಳು ಬರಲಿ ಅಂತಾ. 10 ಲಕ್ಷ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಪಠ್ಯ ಪರಿಷ್ಕರಣೆಗೆ ಖರ್ಚು ಮಾಡೋಕೆ ಆಗುತ್ತೆ. ಮಕ್ಕಳ ಸಮವಸ್ತ್ರ, ಶೂಗೆ ನಿಮ್ಮಲ್ಲಿ ಹಣವಿಲ್ಲ. ಮಕ್ಕಳ ಯೋಜನೆಯಲ್ಲಿ ಕಮೀಷನ್ಗೆ ಕಾಯಬೇಡಿ. ರಾಯಚೂರು, ಕಲಬುರಗಿಯಲ್ಲಿ ಅಪೌಷ್ಠಿಕತೆ ಇದೆ.
ರೋಹಿತ್ ಚಕ್ರತೀರ್ಥಗೆ 130 ಕೋಟಿ ಕೊಡೋಕೆ ಆಗುತ್ತೆ. ಮಕ್ಕಳ ಯೋಜನೆಗೆ ಹಣ ಇಲ್ವೇ? ಎಂದು ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಡೋಕೆ ಯಾಕೆ ಹೆದರೋದು? ನಿಮ್ಮ ಹೆಸರು ಬರುತ್ತೆ ಅಂತ ಹೆದರ್ತೀರಾ ಎಂದು ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಪ್ರಶ್ನೆ ಮಾಡಿದರು.
ಮೇಲ್ಮನೆಯಲ್ಲಿ ಗೃಹ ಸಚಿವರು ಹಗರಣ ಆಗಿಲ್ಲ ಎಂದಿದದ್ರು. ಉನ್ನತ ಅಧಿಕಾರಿ ತಂಡ ಮಾಡಿ ಕ್ಲೀನ್ ಚಿಟ್ ಕೊಟ್ಟಿದ್ವಿ ಅಂದ್ರು. ಸದನದಲ್ಲಿ ಕೊಟ್ಟಿರುವ ಉತ್ತರ ಎಲ್ಲಿಹೋಯ್ತು? ಹಗರಣ ನಡೆದಿಲ್ಲ ಅನ್ನೋದಕ್ಕೆ ವರದಿ ಏನಿದೆ? ವರದಿ ಕೊಟ್ಟ ಆ ಅಧಿಕಾರಿ ಯಾರು? ಮೊದಲು ಅವರು ಕೊಟ್ಟ ಉತ್ತರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಲಿ. ಇಷ್ಟು ದೊಡ್ಡದಾಗುತ್ತೆ ಅಂತ ಅವರಿಗೆ ಗೊತ್ತಿರಲಿಲ್ವೇನೋ. ಈ ಪ್ರಕರಣದಿಂದ ಗೃಹ ಸಚಿವರು ಹತಾಶರಾಗಿದ್ದಾರೆ ಎಂದರು.
(ಇದನ್ನೂ ಓದಿ: ಶ್ರೀಲಂಕಾದಲ್ಲಿ ಭುಗಿಲೆದ್ದ ಪ್ರತಿಭಟನೆ: ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ.. ಗೋತಬಯ ರಾಜಪಕ್ಸ ಪರಾರಿ)