ಬೆಂಗಳೂರು: ವಾರ್ಡ್ ಮೀಸಲಾತಿ ಸಂಬಂಧ ಆಕ್ಷೇಪ ಸಲ್ಲಿಸುವ ಬದಲು ಕಾಂಗ್ರೆಸ್ ಗೂಂಡಾ ಸಂಸ್ಕೃತಿ ಪ್ರದರ್ಶಿಸಿದೆ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಹರಿಹಾಯ್ದಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಾರ್ಡ್ ವಿಂಗಡನೆ ಹಾಗೂ ಮೀಸಲಾತಿಯನ್ನು ಕಾನೂನು ಪ್ರಕಾರ ಮಾಡಲಾಗಿದೆ. ಕೆಲವರಿಗೆ ವಿರೋಧವಿದ್ದರೆ ಆಕ್ಷೇಪ ಸಲ್ಲಿಸಬಹುದು. ಆದರೆ ಇದ್ಯಾವುದನ್ನು ಮಾಡದೇ ಕಾಂಗ್ರೆಸ್ ಗೂಂಡಾ ವರ್ತನೆ ತೋರಿದೆ. ತೋಳ್ಬಲ ತೋರಿಸಿದೆ. ಕಾನೂನಿನ ಅರಿವಿಲ್ಲದೆ ನಡೆದುಕೊಂಡಿದ್ದಾರೆ. ಹಲವಾರು ವರ್ಷ ಇವರು ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಇವರ ವರ್ತನೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ತೋಳು ಬಲ ತೋರಿಸಿ, ತಲೆಯಲ್ಲಿ ಏನೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಿಕಾಸಸೌಧದಲ್ಲಿ ಕಾಂಗ್ರೆಸ್ ನಡವಳಿಕೆಯಿಂದ ಇದು ಸ್ಪಷ್ಟವಾಗುತ್ತದೆ. ಕಾನೂನು ಬಗ್ಗೆ ಗೊತ್ತಿಲ್ಲದೆ ಮೀಸಲಾತಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕಾನೂನು ಉಲ್ಲಂಘಿಸಿದ್ರೆ ಆಕ್ಷೇಪ ಮಾಡಲಿ. ಇಲ್ಲಿ ಕ್ಷೇತ್ರವನ್ನು ಯುನಿಟ್ ಆಗಿ ತೆಗೆದುಕೊಳ್ಳುವುದಿಲ್ಲ. ಇಡೀ ಬೆಂಗಳೂರನ್ನು ಒಂದು ಯುನಿಟ್ ಆಗಿ ಪರಿಗಣಿಸಿ ಈ ಮೀಸಲಾತಿ ಮಾಡಲಾಗಿದೆ ಎಂದು ತಿಳಿಸಿದರು.
ರಾಮಲಿಂಗಾರೆಡ್ಡಿ ಗೆದ್ದಾಗಿನಿಂದ ಮಂತ್ರಿಗಳೇ ಆಗಿದ್ದಾರೆ. ಬೆಂಗಳೂರಿನಲ್ಲಿ ಬೇರು ಬಿಟ್ಟಿರುವ ಅವರು ಬರಿ ಪೊಲಿಟಿಕಲ್ ಸ್ಟಂಟ್ ಮಾಡುತ್ತಿದ್ದಾರೆ. ಆಕ್ಷೇಪಣೆ ಸಲ್ಲಿಸೋಕೆ ಅವಕಾಶವಿದೆ. ಅವರಿಗೆ ಅಸಮಾಧಾನವಿದ್ದರೆ ಆಕ್ಷೇಪಣೆ ಸಲ್ಲಿಸಲಿ. ಬಾಯಿಗೆ ಬಂದಂತೆ ಮಾತನಾಡಿ, ವಿಕಾಸಸೌಧದಲ್ಲಿ ಪ್ರತಿಭಟಿಸಿದ್ದು ಸರಿಯಲ್ಲ. ಅದು ಅವರ ಸ್ಥಾನಮಾನಕ್ಕೆ ಗೌರವ ತರುವ ವಿಷಯವಲ್ಲ. ನಾವು ಪಾರದರ್ಶಕವಾಗಿಯೇ ಮಾಡಿದ್ದೇವೆ. ಕಾನೂನು ಪ್ರಕಾರವೇ ನಡೆದುಕೊಂಡಿದ್ದೇವೆ. ಕಾಂಗ್ರೆಸ್ ಈಗಲೇ ಸೋಲು ಒಪ್ಪಿಕೊಂಡಿದೆ. ಅದಕ್ಕೆ ಇಂತಹ ಸನ್ನಿವೇಶ ಕ್ರಿಯೇಟ್ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಮುಂದೂಡಲು ಅವರೇ ತಯಾರಿದ್ದಾರೆ. ಗೆಲ್ಲೋದಕ್ಕೆ ಅವರಿಗೆ ಆಗುತ್ತಿಲ್ಲ. ಚುನಾವಣೆ ಎದುರಿಸಿ ಗೆದ್ದು ಬನ್ನಿ. ಶುಕ್ರವಾರ ನಡೆಸಿದ ಪ್ರತಿಭಟನೆಗೆ ಅವರು ಬೆಂಗಳೂರು ಜನರ ಕ್ಷಮೆಯಾಚಿಸಬೇಕು ಎಂದು ಇದೇ ವೇಳೆ ಶಾಸಕ ಸತೀಶ್ ರೆಡ್ಡಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಚಿತಾವಣೆ ಇರಬಹುದು: ಹಿಂದೂಸ್ಥಾನ್ ಜನತಾ ಪಾರ್ಟಿ ಪ್ರಾರಂಭ ವಿಚಾರವಾಗಿ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ್, ಅವರು ನಮ್ಮ ಕಾರ್ಯಕರ್ತರಲ್ಲ. ಕಾಂಗ್ರೆಸ್ನವರ ಚಿತಾವಣೆಯಿರಬಹುದು. ಅವರ ಪ್ರೋತ್ಸಾಹ ಇರಬಹುದು. ಹೊಸ ಪಾರ್ಟಿ ನಮ್ಮ ವಿರುದ್ಧವಾಗಿ ಮಾಡುತ್ತಿಲ್ಲ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ಪಣ: ಕೋಲಾರ, ತುಮಕೂರಿನ ಹಿರಿಯ ನಾಯಕರಿಗೆ ಕೇಸರಿ ಪಡೆ ಗಾಳ!?