ಬೆಂಗಳೂರು : ಕೇಂದ್ರ ಬಿಜೆಪಿ ಸರ್ಕಾರ ನಿತ್ಯ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಮಾಡುವುದರ ಮೂಲಕ ಜನರಿಗೆ ಕೊಡಲಿಪೆಟ್ಟು ಕೊಡುತ್ತಿದೆ ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ನಗರದಲ್ಲಿ 111 ರೂ. ಪೆಟ್ರೋಲ್ ದರ ಇದ್ದು, ಸಾರ್ವಜನಿಕರಿಗೆ ಸಾಂಕೇತಿಕವಾಗಿ ಪೆಟ್ರೋಲ್ ಅನ್ನು ಉಚಿತವಾಗಿ ವಿತರಿಸುವ ಮೂಲಕ ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.
ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯೂ ಸಹ ಏರಿಕೆಯಾಗಿದೆ. ಚುಣಾವಣೆಗೋಸ್ಕರ ಸೀಮಿತವಾಗಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಾರ್ವಜನಿಕರ ಹಿತವನ್ನು ಮರೆತು ನಿತ್ಯ ದರ ಏರಿಕೆ ಮಾಡುವುದರ ಮೂಲಕ ಸಾರ್ವಜನಿಕರ ಜೀವನಕ್ಕೆ ಅಪಾಯವನ್ನು ತಂದಿದೆ ಎಂದು ಕಾಂಗ್ರೆಸ್ ಮುಖಂಡ ಎಸ್. ಮನೋಹರ್ ಆಕ್ರೋಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಕಪ್ಪು ಹಣ ತರಲಿಲ್ಲ, ಯಾರ ಖಾತೆಗೂ ಹದಿನೈದು ಲಕ್ಷ ರೂ. ಹಣ ಹಾಕಲಿಲ್ಲ. ಅಗತ್ಯ ವಸ್ತುಗಳ ಬೆಲೆ ಇಳಿಯಲಿಲ್ಲ. ನೀಡಿದ್ದ ಎಲ್ಲ ಭರವಸೆಗಳು ಸಹ ಸುಳ್ಳಾಗಿವೆ. ಕೇಂದ್ರ ಬಿಜೆಪಿ ಸರ್ಕಾರ ತೊಲಗದೇ ಹೋದರೆ ಜನರು ಜೀವನ ಸಾಗಿಸುವುದೇ ಅತ್ಯಂತ ಕಷ್ಟಕರವಾಗಲಿದೆ. ಹಾಗಾಗಿ, ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಖಂಡಿಸಿ ಪೆಟ್ರೋಲ್ ಬಂಕ್‌ನಲ್ಲಿ ಉಚಿತವಾಗಿ ಪೆಟ್ರೋಲ್ ವಿತರಿಸುವ ಮೂಲಕ ನರೇಂದ್ರ ಮೋದಿ ಅವರ ಬೆಲೆ ಏರಿಕೆ ನೀತಿ ಖಂಡಿಸಲಾಗುತ್ತಿದೆ ಎಂದು ಎಸ್.ಮನೋಹರ್ ಮಾಹಿತಿ ನೀಡಿದರು.
ಇದನ್ನೂ ಓದಿ: ಚಂದ್ರು ಹತ್ಯೆ ಪ್ರಕರಣ : ಹೀಗಿದೆ ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಟಿ ರವಿ ಪ್ರತಿಕ್ರಿಯೆ
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ವಿನೂತನ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ವೆಂಕಟೇಶ್, ಆದಿತ್ಯ, ಹೇಮರಾಜ್, ಪುಟ್ಟರಾಜು, ಮಂಜುನಾಥ್, ಚಂದ್ರಶೇಖರ್, ನವೀನ್, ಸೂಪ್ರಾಜ್, ಪ್ರಶಾಂತ್ ಹಾಗೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.