ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ - ಎಐಸಿಸಿ ನಿನ್ನೆ ವಿವಿಧ ರಾಜ್ಯಗಳಿಗೆ ಉಸ್ತುವಾರಿಗಳನ್ನು ನೇಮಿಸಿದ್ದು, ಇದರಲ್ಲಿ ರಾಜ್ಯಕ್ಕೂ ಪಾಲು ಲಭಿಸಿದೆ. ಮಹಾರಾಷ್ಟ್ರದ ಮುಂಬೈ, ಕೇರಳ ಹಾಗೂ ಅಸ್ಸೋಂನ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ರಾಜ್ಯದ ಇಬ್ಬರು ನಾಯಕರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಕೇರಳ ಹಾಗೂ ಅಸ್ಸೋಂ ರಾಜ್ಯಗಳಿಗೆ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿರುವ ಎಐಸಿಸಿ, ತಲಾ ಮೂವರಿಗೆ ಅವಕಾಶ ಕಲ್ಪಿಸಿದೆ. ಇದರಲ್ಲಿ ರಾಜ್ಯ ಗಡಿ ಜಿಲ್ಲೆಯ ಹಿರಿಯ ಕಾಂಗ್ರೆಸ್ಸಿಗ ಹಾಗೂ ಮಾಜಿ ಎಂಎಲ್ಸಿ ಐವಾನ್ ಡಿಸೋಜ ಅವರಿಗೆ ಕೇರಳದಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಕಲ್ಪಿಸಲಾಗಿದೆ.
ಮುಂಬೈನ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಿಸಿರುವ ಕಾಂಗ್ರೆಸ್ ರಾಷ್ಟ್ರೀಯ ನಾಯಕರು, ಪ್ರಣಾಳಿಕೆ ಹಾಗೂ ಪ್ರಕಟಣೆ ಸಮಿತಿಯ ಅಧ್ಯಕ್ಷರನ್ನಾಗಿ ಸುರೇಶ್ ಹಿರಿಯಣ್ಣ ಶೆಟ್ಟಿ ಅವರನ್ನು ನೇಮಿಸಿದೆ.
ಮಹಾರಾಷ್ಟ್ರ ಉಸ್ತುವಾರಿಯಾಗಿ ಮಾಜಿ ಸಚಿವ ಎಚ್‌ಕೆ ಪಾಟೀಲ್, ತಮಿಳುನಾಡು, ಗೋವಾ ಹಾಗೂ ಪುದುಚೆರಿ ಉಸ್ತುವಾರಿಯಾಗಿ ದಿನೇಶ್ ಗುಂಡೂರಾವ್, ರಾಷ್ಟ್ರೀಯ ಮಟ್ಟದ ಸಮಿತಿಯಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ರಾಜ್ಯದ ಹಲವು ನಾಯಕರಿಗೆ ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದೀಗ ಎಐಸಿಸಿ ಮತ್ತಿಬ್ಬರು ನಾಯಕರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ.