ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಾಳೆ ಬೆಳಗ್ಗೆ 9 ಗಂಟೆಗೆ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಕಚೇರಿಯಲ್ಲಿ ನಡೆಯಲಿದೆ.
ವಿಧಾನಸಭೆ ಅಧಿವೇಶನವನ್ನು 10 ದಿನಗಳಿಗೆ ವಿಸ್ತರಿಸಬೇಕು. ನೆರೆ ಹಾಗೂ ಬರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು. ಪ್ರತಿಪಕ್ಷಗಳನ್ನು ಹತ್ತಿಕ್ಕಿ ಸೀಮಿತ ಅವಧಿಗೆ ಅಧಿವೇಶನ ನಡೆಸುವ ನಿಲುವನ್ನು ಖಂಡಿಸುವ ಹಾಗೂ ಸದನದಲ್ಲಿ ಈ ಸಂಬಂಧ ಹೋರಾಟ ನಡೆಸುವ ವಿಚಾರವಾಗಿ ಚರ್ಚಿಸಲು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ಪಕ್ಷದ ಎಲ್ಲ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಉಪಸ್ಥಿತರಿರುವಂತೆ ಸೂಚಿಸಲಾಗಿದ್ದು, ಒಂದು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಕೇವಲ ಮೂರು ದಿನಗಳ ಅವಧಿಗೆ ಮಾತ್ರ ವಿಧಾನಮಂಡಲ ಅಧಿವೇಶನ ಕರೆದಿರುವ ಸರ್ಕಾರದ ಕ್ರಮವನ್ನು ಯಾವ ರೀತಿ ಪರಿಣಾಮಕಾರಿಯಾಗಿ ಮಂಡಿಸಬಹುದು ಎನ್ನುವುದನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲು ತೀರ್ಮಾನಿಸಲಾಗಿದೆ.
ವಿಧಾನಸಭೆ ಕಲಾಪದ ಚಿತ್ರೀಕರಣಕ್ಕೆ ಮಾಧ್ಯಮಗಳನ್ನು ನಿಷೇಧಿಸಿರುವ ಸರ್ಕಾರದ ಕ್ರಮವನ್ನು ಕೂಡ ನಾಳಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಿ ಸರ್ಕಾರದ ನಿಲುವಿನ ವಿರುದ್ಧ ಹೋರಾಟದ ಅಸ್ತ್ರ ರೂಪಿಸಲು ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ.