ಬೆಂಗಳೂರು: ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆಗೆ ಕಾಂಗ್ರೆಸ್ ಪಕ್ಷದ ಸದಸ್ಯರು ಇಂದು ಹಾಜರಾಗಲಿಲ್ಲ.
ಸಭೆಯಲ್ಲಿ ಭಾಗವಹಿಸುವ ಮುನ್ನ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಿನ್ನೆ ಸ್ಪೀಕರ್ಗೆ ಸಿದ್ದರಾಮಯ್ಯ ಪತ್ರ ಬರೆದ ತಕ್ಷಣ ನಾನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ದೇಶ್ಪಾಂಡೆ ಜತೆ ಚರ್ಚೆ ಮಾಡಿದ್ದೇನೆ. ಸಭೆಗೆ ಬರುವಂತೆ ಮನವಿ ಮಾಡಿದ್ದೇನೆ. ಹಿಂದಿನ ಬಿಎಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಗೊಂದಲ ಇದ್ದರೂ ಚರ್ಚೆ ಮೂಲಕ ಬಗೆಹರಿಸಿಕೊಳ್ಳಬಹುದು. ಕೂತು ಚರ್ಚೆ ಮಾಡಿದ್ರೆ ಎಲ್ಲವೂ ಬಗೆಹರಿಯುತ್ತೆ. ಅವರ ಬೇಡಿಕೆ ಏನು ಅನ್ನೋದು ಗೊತ್ತಿಲ್ಲ. ಅವರು ಸಭೆಗೆ ಬಂದ್ರೆ ಚರ್ಚೆ ಮಾಡಬಹುದು. ಮುಕ್ತ ಮನಸ್ಸಿನಿಂದ ಕುಳಿತು ಚರ್ಚೆ ಮಾಡಿ, ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸೋಣ ಎಂದರು.
ಸಭೆ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಿನ್ನೆ ಸಿದ್ದರಾಮಯ್ಯ ಪತ್ರ ಬರೆದ ತಕ್ಷಣ ನಾನೇ ಸಿದ್ದರಾಮಯ್ಯಗೆ ಕರೆ ಮಾಡಿ ಮಾತನಾಡಿದೆ. ಬಿಎಸಿ ಸಭೆಗೆ ಬರುವಂತೆ ಮನವಿ ಮಾಡಿದೆ. ಸದನ ನಡೆಸಲು ಆಡಳಿತ ಮತ್ತು ವಿಪಕ್ಷ ಎರಡೂ ಮುಖ್ಯ. ಇಬ್ಬರನ್ನು ಪರಿಗಣಿಸಬೇಕು. ಅಭಿಪ್ರಾಯ ಭೇದ ಸಾಮಾನ್ಯ. ಇಬ್ಬರ ಮೇಲೂ ಜವಾಬ್ದಾರಿ ಇದೆ. 60 ವರ್ಷ ದೇಶ ಆಳಿದ ಅನುಭವ ಕಾಂಗ್ರೆಸ್ ಪಕ್ಷಕ್ಕೆ ಇದೆ. ಅವರನ್ನು ಕರೆದು ಮಾತುಕತೆ ನಡೆಸುತ್ತೇನೆ ಎಂದರು.
ಸಿದ್ದರಾಮಯ್ಯ ಅವರಿಗಾಗಲಿ ಕಾಂಗ್ರೆಸ್ನ ಇತರ ನಾಯಕರಿಗೆ ನಾನು ಸಂವಿಧಾನದ ಬಗ್ಗೆ ಹೇಳಿಕೊಡುವಂತಿಲ್ಲ. ಎಲ್ಲರಿಗೂ ಸಂವಿಧಾನದ ಬಗ್ಗೆ ಗೊತ್ತಿದೆ. 50-60 ವರ್ಷ ಕಾಂಗ್ರೆಸ್ನವರೇ ಆಡಳಿತ ನಡೆಸಿದ್ದಾರೆ. ಸಭೆಗೆ ಬಂದು ಎಲ್ಲರೂ ಸೇರಿ ಚರ್ಚಿಸಿ, ಅಭಿಪ್ರಾಯ ವ್ಯಕ್ತಪಡಿಸಬೇಕು. ಸಿದ್ದರಾಮಯ್ಯ ಜೊತೆ ಚರ್ಚಿಸಿ ಮತ್ತೊಮ್ಮೆ ಬಿಎಸಿ ಸಭೆ ಕರೆಯುತ್ತೇನೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿಲ್ಲ. ಕಳೆದ ಬಾರಿ ಸದನದಲ್ಲಿ ಪ್ರಸ್ತಾಪ ಆಗಿದ್ದಾಗ ಎಲ್ಲ ವಿವರ ಕೊಟ್ಟಿದ್ದೆ. ಬಹಿಷ್ಕಾರ ಒಂದೇ ಎಲ್ಲದಕ್ಕೂ ಮಾರ್ಗವಲ್ಲ. ಸದನದಲ್ಲಿ ಭಾಗವಹಿಸಿ ಅವರ ಅಭಿಪ್ರಾಯ ತಿಳಿಸಬೇಕು ಎಂದರು.