ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2 ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಪಾರ್ಕಿಂಗ್ನಲ್ಲಿ ಬದಲಾವಣೆ ಮಾಡಲಾಗಿದ್ದು, ಏರ್ಪೋರ್ಟ್ಗೆ ಬರುವ ಪ್ರಯಾಣಿಕರಿಗೆ ಸ್ವಂತ ವಾಹನದ ಬದಲು ಟ್ಯಾಕ್ಸಿ ಅಥವಾ ಬಸ್ ಸೇವೆಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‍ನ ಅಭಿವೃದ್ದಿಗಾಗಿ ಬೃಹತ್ ಕಾಮಗಾರಿಗಳನ್ನ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ನೀಡುವ ಕಾರಣಕ್ಕೆ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಪಾರ್ಕಿಂಗ್ನಲ್ಲಿ ಬದಲಾವಣೆ ಮಾಡಲಾಗಿದೆ. ಪಾರ್ಕಿಂಗ್ ಬದಲಾವಣೆಯಿಂದ ಸ್ವಂತ ಕಾರು ಚಲಾಯಿಸಿಕೊಂಡು ಬರುವ ಪ್ರಯಾಣಿಕರು ಮತ್ತು ಸಂದರ್ಶಕರ ಮೇಲೆ ಪರಿಣಾಮ ಬಿರಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಸಂದರ್ಶಕರು ಮತ್ತು ಪ್ರಯಾಣಿಕರಿಗೆ ಮಾರ್ಚ್ 09, 2020 ರಿಂದ ಪಾರ್ಕಿಂಗ್ ಬದಲಾವಣೆ ಬಿಸಿ ತಟ್ಟಲಿದೆ. ಸಂದರ್ಶಕರ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಪಾರ್ಕಿಂಗ್ ಬದಲಾವಣೆಯನ್ನ ಮ್ಯಾಪ್ ಮೂಲಕ ಮಾಹಿತಿ ಪ್ರಕಟಿಸಿದೆ.
ಪ್ರಯಾಣಿಕರ ಪಾರ್ಕಿಂಗ್ ಪ್ರದೇಶಗಳನ್ನು (ಪಿ1: ದ್ವಿಚಕ್ರವಾಹನ, ಪಿ2 : ಬಜೆಟ್ ಮತ್ತು ಪಿ3 : ಪ್ರೀಮಿಯಮ್) ಮುಚ್ಚಲಾಗುವುದು. ಖಾಸಗಿ ಪಾರ್ಕಿಂಗ್(ಟ್ಯಾಕ್ಸಿಯೇತರ) ಅವಕಾಶ ಪಿ 4 ರಲ್ಲಿ ಲಭ್ಯವಾಗಲಿದೆ. ಪಿ 6 ಪ್ರದೇಶ ಮಾರ್ಚ್ 20, 2020 ರಿಂದ ಸಾರ್ವಜನಿಕರಿಗೆ ತೆರದುಕೊಳ್ಳಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸ್ವಯಂ ಚಾಲನೆಯ ಕಾರುಗಳ ಬಳಕೆಯನ್ನು ಮಿತಿಗೊಳಿಸಲು ಪ್ರಯಾಣಿಕರಿಗೆ ಸಲಹೆ ನೀಡಲಾಗುತ್ತಿದೆ. ಸ್ವತಃ ಚಲಾಯಿಸುವ ವಾಹನಗಳಲ್ಲಿ ಬರುವವರು ಪಿ 4 ಅಥವಾ ಪಿ 6 ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಬಹುದು. ಪಿ 4 ನಿಂದ ಟರ್ಮಿನಲ್‍ಗೆ ನಡೆದು ಬರುವ ಸಮಯ ಬಹಳ ಕಡಿಮೆ ಇರುತ್ತದೆ. ಪಿ 6 ರಲ್ಲಿ ವಾಹನ ನಿಲುಗಡೆ ಮಾಡುವ ಪ್ರಯಾಣಿಕರು ಉಚಿತವಾದ ವಿಮಾನ ನಿಲ್ದಾಣದಲ್ಲಿರುವ ಶಟಲ್ ಸೇವೆ ಬಳಸಬಹುದು. ಇಲ್ಲಿ 10 ನಿಮಿಷಕ್ಕೊಮ್ಮೆ ಟರ್ಮಿನಲ್ ಮತ್ತು ಪಿ 6 ಪಾರ್ಕಿಂಗ್ ಪ್ರದೇಶಗಳ ನಡುವೆ ಶಟಲ್ ವಾಹನಗಳು ಚಲಿಸುತ್ತಿರುತ್ತವೆ. ವಿಮಾನ ನಿಲ್ದಾಣದ ಟರ್ಮಿನಲ್‍ಗೆ ಸುಲಭ ಸಂಪರ್ಕ ಹೊಂದುವ ಅವಕಾಶ ಮಾಡಿಕೊಡುವುದಕ್ಕಾಗಿ ಶಟಲ್ ಸೇವೆಯನ್ನು ಜಾರಿಗೆ ತರಲಾಗಿದೆ.
ಓಲಾ ಬೋರ್ಡಿಂಗ್ ಝೋನ್ ಮೇಲೆ ಯಾವುದೇ ಪರಿಣಾಮ ಇರುವುದಿಲ್ಲ. ಊಬರ್ ಬೋರ್ಡಿಂಗ್ ಪ್ರದೇಶ ಪಕ್ಕದ ಸೌಲಭ್ಯಕ್ಕೆ ಮಾರ್ಚ್ 17, 2020 ಕ್ಕೆ ವರ್ಗಾವಣೆಯಾಗಲಿದೆ. ಆದರೆ, ಈ ಬದಲಾವಣೆಗಳು ಆ್ಯಪ್ ಆಧಾರಿತ ಟ್ಯಾಕ್ಸಿಗಳ ಸೇವೆಗಳ ಮೇಲೆ ಪರಿಣಾಮ ಉಂಟು ಮಾಡುವುದಿಲ್ಲ. ಏರ್ಪೋರ್ಟ್ ಟ್ಯಾಕ್ಸಿಗಳು ತಮ್ಮ ಪ್ರಸ್ತುತ ಸ್ಥಳದಿಂದಲೇ ಕಾರ್ಯಾಚರಣೆಯನ್ನು ಮುಂದುವರಿಸಲಿವೆ. ಇದೇ ರೀತಿ ಬಿಎಂಟಿಸಿ ವಾಯುವಜ್ರ ಮತ್ತು ಕೆಎಸ್ಆರ್ಟಿಸಿ ಫ್ಲೈಬಸ್ ಸೇವೆಗಳು ಕಾರ್ಯನಿರ್ವಹಿಸಲಿವೆ. ಟರ್ಮಿನಲ್ 2 ಅಭಿವೃದ್ಧಿಯಿಂದ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಹೆಚ್ಚು ಅಗಲವಾದ ರಸ್ತೆಗಳು, ಮೆಟ್ರೋ ನಿಲ್ದಾಣಗಳು ಮತ್ತು ಬಹು ಮಾದರಿಯ ಸಾರಿಗೆ ಕೇಂದ್ರ ಸೇರಿವೆ. ಈ ಎಲ್ಲಾ ಮೂಲ ಸೌಕರ್ಯಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮಾರ್ಥ್ಯ ಹೆಚ್ಚಿಸಲಿದೆ.