ಬೆಂಗಳೂರು : ಮುಂದಿನ 25 ವರ್ಷದಲ್ಲಿ ಜಗತ್ತಿನಲ್ಲಿಯೇ ಭಾರತ ಮುಂದುವರಿದ ರಾಷ್ಟ್ರವಾಗಲಿದೆ. ವಿಶ್ವಗುರು ಎನಿಸಿಕೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಭವಿಷ್ಯ ನುಡಿದರು.
ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಸೇವಾ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ನಗರದ ಕೋರಮಂಗಲದ 5ನೇ ಬ್ಲಾಕ್ ಕೆಹೆಚ್ಬಿ ಕಾಲೋನಿಯ ಕಲ್ಯಾಣ ಮಂಟಪ ಆಟದ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ 'ನವಭಾರತ ಮೇಳ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಗದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ನಾಳೆ ಬೆಳಗ್ಗೆ ಆಗುವಷ್ಟರಲ್ಲಿ ಎಲ್ಲವನ್ನು ಸರಿಪಡಿಸುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಗುಣಮಟ್ಟದ ವಿಚಾರದಲ್ಲಿ ದಿನದಿಂದ ದಿನಕ್ಕೆ ಉತ್ತಮ ಪ್ರಗತಿಯನ್ನು ದೇಶ ಕಾಣುತ್ತಿದೆ ಎಂದರು.
ಅಭಿವೃದ್ಧಿ ನೀಲನಕ್ಷೆ ಸಿದ್ಧ : ಮುಂದಿನ 25 ವರ್ಷದಲ್ಲಿ ದೇಶ ಯಾವ ರೀತಿ ಅಭಿವೃದ್ಧಿ ಕಾಣಬೇಕು ಎಂಬ ನೀಲನಕ್ಷೆಯನ್ನು ಸಹ ಸಿದ್ಧಪಡಿಸಿಕೊಂಡಿದ್ದೇವೆ. ಮಕ್ಕಳು ಹಾಗೂ ಯುವಕರು ಮುಂಬರುವ ದಿನಗಳಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸುತ್ತಿದ್ದೇವೆ ಎಂದರು.
ಸದೃಢವಾಗಿ ನಿಲ್ಲಬೇಕು : ಜಾಗತಿಕ ಮಟ್ಟದ ಸ್ಪರ್ಧೆಯನ್ನು ಎದುರಿಸಿ ನಾವು ಮುಂದೆ ಬರಬೇಕೆ ಹೊರತು, ಅಸಹಾಯಕರಾಗಿ ಹಿಂದುಳಿಯುವುದು ಸರಿಯಲ್ಲ. ಮಾನವೀಯತೆ ದೃಷ್ಟಿಯಿಂದ ಅನ್ಯ ರಾಷ್ಟ್ರಗಳು ನೀಡುವ ಸಹಕಾರ ಕೆಲದಿನಗಳ ಮಟ್ಟಿಗೆ ಸಾಲುತ್ತದೆ. ಆದರೆ, ನಾವು ನಮ್ಮ ಕಾಲನ್ನೇ ಬಲಪಡಿಸಿಕೊಂಡು ಸದೃಢವಾಗಿ ನಿಲ್ಲುವ ಕಾರ್ಯ ಮಾಡಿಕೊಂಡರೆ ಅದು ಶಾಶ್ವತ ಪರಿಹಾರ. ಇದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ತರುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಮೋದಿ ಇಡೀ ವಿಶ್ವಕ್ಕೆ ಮಾದರಿ : ಪ್ರಕೃತಿಯನ್ನು ನಾಶಪಡಿಸಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ದೇಶದ ಪ್ರಕೃತಿಯನ್ನು ಉಳಿಸಿಕೊಳ್ಳುವ ಜೊತೆಗೆ ಬೆಳೆಸುವ ಕಾರ್ಯವನ್ನೂ ಮಾಡಲಾಗುತ್ತಿದೆ. ಪ್ರಕೃತಿಯನ್ನು ಉಳಿಸಿಕೊಂಡು ದೇಶವನ್ನು ಹೇಗೆ ಬೆಳೆಸಬೇಕು ಎಂಬುದನ್ನು ನರೇಂದ್ರ ಮೋದಿ ಇಡೀ ವಿಶ್ವಕ್ಕೆ ಮಾದರಿಯಾಗುವ ರೀತಿ ತಿಳಿಸಿ ಕೊಡುತ್ತಿದ್ದಾರೆ. ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಅಭಿವೃದ್ಧಿ ಮಾತ್ರವಲ್ಲ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಯನ್ನು ಜೊತೆಯಲ್ಲೇ ಮಾಡಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.