ಬೆಂಗಳೂರು: ನಗರದ ಕೆ.ಆರ್. ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗೆ ಹರಿಯುತ್ತಿರುವ ಕೋರಮಂಗಲ ರಾಜಕಾಲುವೆಯನ್ನು ಸುಂದರವಾದ ಜಲಮಾರ್ಗವಾಗಿ ಅಭಿವೃದ್ಧಿ ಪಡಿಸಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ 179 ಕೋಟಿ ರೂ. ಮೊತ್ತದ ಈ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಇಂದು ಶಾಂತಿನಗರದ ಬಳಿ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಬೆಂಗಳೂರು ನಗರದ ಕೆ.ಆರ್. ಮಾರುಕಟ್ಟೆಯಿಂದ ಬೆಳ್ಳಂದೂರಿಗೆ ಹರಿಯುವ ಕೋರಮಂಗಲ ಕಣಿವೆಯನ್ನು (ಕೆ-100) ಜಲಮಾರ್ಗ ಯೋಜನೆಯನ್ನಾಗಿ ಸೌಂದರ್ಯೀಕರಣಗೊಳಿಸುವ ಕಾರ್ಯಕ್ರಮಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಬೆಂಗಳೂರು ನಾಗರಿಕ ಜಲಮಾರ್ಗ ಯೋಜನೆ ಇದು. ಬೆಂಗಳೂರು ಅನೇಕ ರೀತಿಯಲ್ಲಿ ವಿಸ್ತರಿಸುತ್ತಾ, ಬೆಳೆಯುತ್ತಾ ಬಂದಿದೆ. ರಾಜಕೀಯ ರಾಜಧಾನಿ ಅಷ್ಟೇ ಅಲ್ಲ, ಉದ್ಯಮ, ಉದ್ಯೋಗ, ಆರ್ಥಿಕತೆಯ, ಶಿಕ್ಷಣ, ಸಂಶೋಧನೆಯ ರಾಜಧಾನಿಯೂ ಹೌದು. ಅತ್ಯುತ್ತಮ ಜೀವನಮಟ್ಟ ಕೊಡಲು ಸರ್ಕಾರ ಶ್ರಮಿಸುತ್ತಿದೆ ಎಂದರು.
ಜಲಮಾರ್ಗ ಯೋಜನೆಯಿಂದ ಕೃತಕ ನೆರೆ ತಪ್ಪಿಸಲು ಸಾಧ್ಯವಿದೆ. ಈ ರಾಜಕಾಲುವೆಯನ್ನು ಜಲಮಾರ್ಗವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಹತ್ತು ತಿಂಗಳೊಳಗೆ 175 ಕೋಟಿ ರೂ. ಯೋಜನೆ ಪೂರ್ಣ ಆಗಬೇಕು. ನಂತರ 25-30 ಸಾವಿರ ಜನ ಸೇರಿಸಿ ಇದನ್ನು ಉದ್ಘಾಟನೆ ಮಾಡಬೇಕಿದೆ. ಹಣಕಾಸಿಗೆ ಯಾವುದೇ ತೊಂದರೆಯಾಗದಂತೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಬಿಬಿಎಂಪಿ ವಿಶೇಷ ಆಡಳಿತಾಧಿಕಾರಿ ಗೌರವ ಗುಪ್ತಾ ಮಾತನಾಡಿ, ಬೆಂಗಳೂರು ಮಿಷನ್-2021ರ ಭಾಗವಾಗಿ ಸಿಎಂ ಆಶಯದಂತೆ ವಿನೂತನ ವಿನ್ಯಾಸದ ರಾಜಕಾಲುವೆಯನ್ನು ನಿರ್ಮಿಸುವ ಉದ್ದೇಶ ಇದಾಗಿದೆ. ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರುವರೆಗೆ ಇರುವ ರಾಜಕಾಲುವೆಯನ್ನು ನಾಗರಿಕರ ಜಲಮಾರ್ಗವಾಗಿ ಬದಲಾಯಿಸುವ ಸವಾಲಿನ ಯೋಜನೆ ಇದು ಎಂದು ತಿಳಿಸಿದರು.
ಜಲಮಾರ್ಗದ ವಿಶೇಷತೆಗಳು..
- ಗುಜರಾತ್ನ ಸಬರಮತಿ ನದಿ ಯೋಜನೆ ಮಾದರಿಯಲ್ಲಿ ಅಭಿವೃದ್ಧಿ
- ರಾಜಕಾಲುವೆಯಿಂದ ಒಳಚರಂಡಿ, ಕೈಗಾರಿಕಾ ತ್ಯಾಜ್ಯ ನೀರು ಬೇರ್ಪಡಿಸುವುದು
- 5 ಎಂಎಲ್ಡಿ ಸಾಮರ್ಥ್ಯ, ಎಸ್ಟಿಪಿ ನಿರ್ಮಿಸಿ ವರ್ಷದ 365 ದಿನ ಶುದ್ಧ ನೀರು ಹರಿಯುವಂತೆ ಮಾಡುವುದು
- ರಾಜಕಾಲುವೆ ತಳಭಾಗ ಸ್ವಚ್ಛಗೊಳಿಸಿ, ನೀರು ಇಂಗುವಂತೆ ವಿನ್ಯಾಸ
- ಜಲಮಾರ್ಗದ ಎರಡೂ ಬದಿ ಚರ್ಚ್ ಸ್ಟ್ರೀಟ್ ಮಾದರಿಯ ಪಾದಚಾರಿ ಮಾರ್ಗ ನಿರ್ಮಿಸಿ, ನಗರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಜನರಿಗೆ ಸಂಚಾರಕ್ಕೆ ಅವಕಾಶ
- ತಳಮಟ್ಟದ ಸೇತುವೆಗಳನ್ನು ವಾಸ್ತುಶಿಲ್ಪ ಮಾದರಿಯಲ್ಲಿ ಅಭಿವೃದ್ಧಿ
- ಉದ್ಯಾನದ ರೀತಿ ದೀಪ, ಗಿಡಗಳಿಂದ ಅಲಂಕಾರ, ಸಿಸಿ ಕ್ಯಾಮರಾ ಅಳವಡಿಕೆ
- 5 ವರ್ಷದ ವಾರ್ಷಿಕ ನಿರ್ವಹಣೆ ಗುತ್ತಿಗೆದಾರನ ಜವಾಬ್ದಾರಿ
- ಆಯ್ದ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ
ಒಟ್ಟಿನಲ್ಲಿ 179.5 ಕೋಟಿ ರೂ. ವೆಚ್ಚದಲ್ಲಿ ಸ್ಟಾರ್ ಇನ್ಫ್ರಾಟೆಕ್ ಸಂಸ್ಥೆಗೆ ಹತ್ತು ತಿಂಗಳಲ್ಲಿ ರಾಜಕಾಲುವೆಯ ಸ್ವರೂಪ ಬದಲಿಸಿ, ಸೌಂದರ್ಯೀಕರಣಗೊಳಿಸುವ ಗುತ್ತಿಗೆ ನೀಡಲಾಗಿದೆ.