ಬೆಂಗಳೂರು: ಕಳೆದ ಒಂದು ವಾರದಿಂದ ವಿವಿಧ ಇಲಾಖೆಗಳೊಂದಿಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಂದು ಆರ್ಥಿಕ ಇಲಾಖೆಯೊಂದಿಗೆ ಸಭೆ ನಡೆಸಿ ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಚರ್ಚೆ ನಡೆಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಇಂದು ಸಂಜೆ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳು ಸಲ್ಲಿಸಿರುವ ಪ್ರಸ್ತಾವನೆ ಮತ್ತು ವಿವಿಧ ಯೋಜನೆಗಳ ಜಾರಿಯ ಸಾಧ್ಯತೆ ಕುರಿತು ಪರಾಮರ್ಶೆ ನಡೆಸಿದರು.
ಕೋವಿಡ್-19ನಿಂದಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆ ಬಜೆಟ್ ಗಾತ್ರವನ್ನು ಹೆಚ್ಚಿಸಬೇಕೇ?, ಬೇಡವೇ ಎಂಬುದರ ಬಗ್ಗೆ ಅಧಿಕಾರಿಗಳಿಂದ ಅಭಿಪ್ರಾಯ ಕ್ರೂಢೀಕರಿಸಿದರು.
2020-21ನೇ ಆರ್ಥಿಕ ಸಾಲಿನಲ್ಲಿ ವೆಚ್ಚ ಮಾಡಲಾಗಿರುವ ಅನುದಾನದ ಬಗ್ಗೆ ಮಾಹಿತಿ ಪಡೆದು, 2021-22ನೇ ಸಾಲಿನಲ್ಲಿ ಎಲ್ಲಾ ಮೂಲಗಳಿಂದ ಎಷ್ಟು ಆದಾಯದ ನಿರೀಕ್ಷೆ ಮಾಡಬಹುದು, ಅದರ ಆಧಾರದಲ್ಲಿ ಇಲಾಖಾವಾರು ಪ್ರಸ್ತಾವನೆಗಳ ಪೈಕಿ ಯಾವುದನ್ನು ಬಜೆಟ್‌ನಲ್ಲಿ ಪರಿಗಣಿಸಬಹುದು ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್ ಸೇರಿದಂತೆ ಆರ್ಥಿಕ ಇಲಾಖೆಯ ಇತರೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.