ಬೆಂಗಳೂರು: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಆಡಿರುವುದು ಉದ್ಧಟತನದ ಮಾತು. ಬೆಳಗಾವಿ ಎಂದೆಂದೂ ಕರ್ನಾಟಕದ್ದೇ. ಅವರು ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆಯುತ್ತಿರುವ ಸಚಿವ ಸಂಪುಟ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಸಿಎಂ ಅಜಿತ್ ಪವಾರ್ ಹೇಳಿಕೆ ಖಂಡನೀಯ. ಅವರು ಗೊಂದಲದ ಹೇಳಿಕೆ ಕೊಟ್ಟಿದ್ದಾರೆ. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಅನ್ನೋದು ಜಗತ್ತಿಗೆ ಗೊತ್ತು ಎಂದರು.
ಮರಾಠ ಅಭಿವೃದ್ಧಿ ನಿಗಮ ಮಾಡಿರುವ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಮರಾಠಿಗರು ಕರ್ನಾಟಕದಲ್ಲೇ ಇರುವವರು. ಹಾಗಾಗಿ ಮರಾಠ ಅಭಿವೃದ್ಧಿ ನಿಗಮ ಮಾಡಿದ್ದೇವೆ ಎಂದು ಹೇಳಿದರು.
ಈ ಬಾರಿ ಬೆಂಗಳೂರಿನಲ್ಲೇ ವಿಧಾನಸಭಾ ಅಧಿವೇಶನ ನಡೆಸಲಾಗುತ್ತದೆ. ಬೆಳಗಾವಿಯಲ್ಲಿ ಅಧಿವೇಶನವಿಲ್ಲ. ಅಧಿವೇಶನ ನಡೆಸುವ ದಿನಾಂಕದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದರು.
ಸಂಪುಟ ಸಭೆ ಆರಂಭ: ಡಿಸಿಎಂ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಆರ್. ಅಶೋಕ್ ಮತ್ತಿತರ ಸಚಿವರು ಸಿಎಂ ಜೊತೆ ಆಗಮಿಸಿದ್ದು, ಇದೀಗ ಸಂಪುಟ ಸಭೆ ಆರಂಭವಾಗಿದೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಇತ್ತೀಚೆಗಷ್ಟೇ ವಿವಾದಿತ ಹೇಳಿಕೆ ನೀಡಿದ್ದರು.