ಬೆಂಗಳೂರು : ರಾಜ್ಯಸಭಾ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಧೋರಣೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ.
ರಾಜ್ಯಸಭಾ ಚುನಾವಣೆಗೆ ಬೆಳಗಾವಿ ವಿಭಾಗ ಪ್ರಭಾರಿ ಈರಣ್ಣ ಕಡಾಡಿ ಹಾಗೂ ಬಳ್ಳಾರಿ ವಿಭಾಗ ಪ್ರಭಾರಿ ಅಶೋಕ್ ಗಸ್ತಿ ಅವರನ್ನ ಅಭ್ಯರ್ಥಿಗಳನ್ನಾಗಿ ಬಿಜೆಪಿ ಹೈಕಮಾಂಡ್ ಘೋಷಿಸಿದೆ. ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರ ಜತೆಗೆ ಟಿಕೆಟ್ ವಂಚಿತರೂ ಶುಭ ಕೋರಿದ್ದಾರೆ. ಆದರೆ, ಸಿಎಂ ಯಡಿಯೂರಪ್ಪ ಮಾತ್ರ ಅಭ್ಯರ್ಥಿಗಳಿಗೆ ಶುಭ ಕೋರದೆ ಫುಲ್ ಸೈಲೆಂಟ್ ಆಗಿದ್ದಾರೆ.
ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಕಾವೇರಿ ನಿವಾಸಕ್ಕೆ ತೆರಳಿದ ಸಿಎಂ ಮೌನಕ್ಕೆ ಶರಣಾಗಿದ್ದಾರೆ. ಯಾರೊಂದಿಗೂ ದೂರವಾಣಿ ಮೂಲಕ ಮಾತುಕತೆ ನಡೆಸಿಲ್ಲ. ಜಯದೇವ ಆಸ್ಪತ್ರೆಯಿಂದ ಚೆಕ್ ಸ್ವೀಕಾರ ಮಾಡಿದ್ದರ ಹೊರತು ಮತ್ತೆ ಯಾರನ್ನೂ ಭೇಟಿಯಾಗಿಲ್ಲ. ಬಿಜೆಪಿ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ, ಎರಡು ಸ್ಥಾನಕ್ಕೆ ಮೂರು ಹೆಸರುಗಳನ್ನು ಅಂತಿಮಗೊಳಿಸಿ ಪಕ್ಷದ ಕೇಂದ್ರ ಘಟಕಕ್ಕೆ ಶಿಫಾರಸು ಮಾಡಲಾಗಿತ್ತು.
ಆದರೆ, ಆ ಮೂರು ಹೆಸರುಗಳಲ್ಲಿ ಒಂದೂ ಹೆಸರು ಪರಿಗಣಿಸದೆ ಇರುವುದಕ್ಕೆ ಬಿಎಸ್‌ವೈ ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ ಕನಿಷ್ಠ ಪಕ್ಷ ಒಂದು ಟ್ವೀಟ್ ಮೂಲಕವೂ ಅಭ್ಯರ್ಥಿಗಳಿಗೆ ಸಿಎಂ ಶುಭ ಕೋರಿಲ್ಲ.