ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ ತಯಾರಿ ಆರಂಭಿಸುತ್ತಿದ್ದು, ಇಂದು ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಮ್ಯಾರಥಾನ್ ಸಭೆ ಆಯೋಜನೆ ಮಾಡಲಾಗಿದೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ಸಭೆ ನಡೆಯಲಿವೆ.
2023ರ ಚುನಾವಣೆಯನ್ನ ಸವಾಲಾಗಿ ಪರಿಗಣಿಸಿರುವ ಸಂತೋಷ್, ಹೈಕಮಾಂಡ್ ನೀಡಿರುವ ಮಿಷನ್ 150+ ಸೀಟು ಟಾರ್ಗೆಟ್ ರೀಚ್ ಮಾಡಲು ತಂತ್ರ ರೂಪಿಸುತ್ತಿದ್ದಾರೆ ಇದರ ಭಾಗವಾಗಿ ರಾಜ್ಯ ಬಿಜೆಪಿ ಮುಖಂಡರ ಜೊತೆ ಮ್ಯಾರಥಾನ್ ಸಭೆ ನಡೆಸಲಿದ್ದಾರೆ. ಮೊದಲು ರಾಜ್ಯದ ವಿವಿಧ ಪದಾಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಲಿದ್ದು, ಬಳಿಕ ವಿಸ್ತಾರಕರ ಜೊತೆಯಲ್ಲಿ ಸಭೆ ಮಾಡಲಿದ್ದಾರೆ. ಈ ವಿಸ್ತಾರಕರು ವಿವಿಧ ಜಿಲ್ಲೆಗಳಿಗೆ ಚುನಾವಣಾ ತಯಾರಿಗೆ ತೆರಳಲಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ಬಿ.ಎಲ್.ಸಂತೋಷ್ ನಡೆಸಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಚುನಾವಣಾ ತಯಾರಿ ಹಾಗೂ ಪಕ್ಷ ಸಂಘಟನೆ ಸಂಬಂಧ ಸಂಜೆ ಮಹತ್ವದ ಚರ್ಚೆ ನಡೆಯಲಿದೆ. ಅಲ್ಲದೆ ಮೇ 3ರಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದು, ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಹೀಗಾಗಿ ಅಮಿತ್ ಶಾ ರಾಜ್ಯಕ್ಕೆ ಬಂದಾಗ ಸಂಘಟನೆ, ಚುನಾವಣೆಗೆ ಪೂರ್ವ ಸಿದ್ಧತೆ ಕುರಿತು ವರದಿ ನೀಡಬೇಕಿದ್ದು, ಅದಕ್ಕೂ ಮುನ್ನ ಒಂದಷ್ಟು ಚುನಾವಣಾ ತಯಾರಿ ಬಗ್ಗೆ ಚರ್ಚೆ ಮಾಡಲಿದ್ದಾರೆ.
ದೆಹಲಿಯಿಂದ ವಾಪಸ್ಸಾದ ಸಿಎಂ: ದೆಹಲಿಯಿಂದ ಬೆಂಗಳೂರಿಗೆ ಸಿಎಂ ಬಸವರಾಜ ಬೊಮ್ಮಾಯಿ ವಾಪಸ್ಸಾಗಿದ್ದಾರೆ. ಬೆಳಗ್ಗೆ 9 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಅಲ್ಲಿಂದ ನೇರವಾಗಿ ಆರ್.ಟಿ ನಗರದ ನಿವಾಸಕ್ಕೆ ತೆರಳಿದರು. ಕೆಲ ಸಮಯ ವಿಶ್ರಾಂತಿ ಪಡೆಯಲಿದ್ದು, ನಂತರ ಬೆಳಗ್ಗೆ 11:30ಕ್ಕೆ ಆರ್.ಟಿ ನಗರ ನಿವಾಸದಿಂದ ಗೃಹ ಕಚೇರಿ ಕೃಷ್ಣಾಗೆ ತೆರಳಿದ್ದಾರೆ. ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ನಡೆಯುವ ಎಂಒಯು ಸಭೆಯಲ್ಲಿ ಭಾಗಿಯಾಗಲಿರುವ ಸಿಎಂ, ಮಧ್ಯಾಹ್ನ1 ಗಂಟೆಗೆ ರಾಮಾನುಜ ಮಠಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 4ಗಂಟೆಗೆ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದು, ಸಂಜೆ 5:30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಜಸ್ಟಿಸ್ ಎಂ ರಾಮಕೃಷ್ಣ ಜನ್ಮ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.
ಮೇ3 ರಂದು ಮಧ್ಯಾಹ್ನ 2 ಗಂಟೆಗೆ ಸಿಎಂ ನಿವಾಸದಲ್ಲಿ ನಡೆಯುವ ಭೋಜನ ಕೂಟದಲ್ಲಿ ಭಾಗಿಯಾಗಲಿರುವ ಅಮಿತ್ ಶಾ ಸಂಜೆ 4 ಗಂಟೆಗೆ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಒಂದೂವರೆ ಗಂಟೆ ಮಹತ್ವದ ಸಭೆ ನಡೆಸುವರು. ಸಂಘಟನಾತ್ಮಕ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದು ಅಗತ್ಯ ತಯಾರಿ ಮಾಡಿಕೊಳ್ಳಲು ಈ ಸಭೆ ನಡೆಸಲಾಗುತ್ತಿದೆ. ಮತ್ತೆ ಅಧಿಕಾರಕ್ಕೆ ಬರಲು ಏನೆಲ್ಲಾ ಮಾಡಬೇಕು ಎನ್ನುವ ಆಕ್ಷನ್ ಪ್ಲಾನ್ ಸಿದ್ಧಪಡಿಸಿ ರಾಜ್ಯ ಘಟಕ ಮತ್ತು ಸರ್ಕಾರಕ್ಕೆ ಅಮಿತ್ ಶಾ ಹೊಸ ಟಾರ್ಗೆಟ್ ನೀಡಲಿದ್ದಾರೆ. ಇದರ ಜೊತೆಗೆ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ, ನಿಗಮ ಮಂಡಳಿಗಳಿಗೆ ನೇಮಕ ಕುರಿತು ಕೂಡಾ ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪುಟ್ಟಸ್ವಾಮಿ ರಾಜೀನಾಮೆ