ಬೆಂಗಳೂರು: ನವೆಂಬರ್ನಲ್ಲಿ ನಡೆಯುವ ಇನ್ವೆಸ್ಟ್ ಕರ್ನಾಟಕ-2022 ಬಂಡವಾಳ ಹೂಡಿಕೆ ಸಮಾವೇಶದ ಹಿನ್ನೆಲೆಯಲ್ಲಿ ವಿವಿಧ ದೇಶಗಳ ರಾಯಭಾರಿಗಳು ಮತ್ತು ಹೈಕಮಿಷನರ್ಗಳ ಜೊತೆಗೆ ಸಭೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿಗೆ ತೆರಳಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 8 ಗಂಟೆ ವಿಮಾನದಲ್ಲಿ ತೆರಳಿದ ಸಿಎಂ, 10.40ಕ್ಕೆ ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ.
ಸಂಜೆ 6 ಗಂಟೆವರೆಗೂ ಕೇಂದ್ರ ಹಲವು ಸಚಿವರನ್ನು ಭೇಟಿಯಾಗಿ ರಾಜ್ಯದ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಸಾಧ್ಯವಾದಲ್ಲಿ ಹೈಕಮಾಂಡ್ ನಾಯಕರ ಭೇಟಿಗೂ ಯತ್ನಿಸಲಿದ್ದಾರೆ. ಸಂಜೆ 6 ಗಂಟೆಗೆ ಇನ್ವೆಸ್ಟ್ ಕರ್ನಾಟಕ-2022 ಬಂಡವಾಳ ಹೂಡಿಕೆ ಸಮಾವೇಶದ ಹಿನ್ನೆಲೆಯಲ್ಲಿ ವಿವಿಧ ದೇಶಗಳ ರಾಯಭಾರಿಗಳು ಮತ್ತು ಹೈ ಕಮೀಷನರ್ ಗಳ ಜೊತೆ ಆಯೋಜನೆ ಮಾಡಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದು ಹೂಡಿಕೆದಾರರ ಸಮಾವೇಶಕ್ಕೆ ಅಧಿಕೃತ ಆಹ್ವಾನ ನೀಡಲಿದ್ದಾರೆ.
ದೆಹಲಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸಾಮಾನ್ಯವಾಗಿ ಮಾಧ್ಯಮಗಳೊಂದಿಗೆ ಮಾತನಾಡಿಯೇ ತೆರಳುತ್ತಿದ್ದ ಸಿಎಂ ಇಂದು ಮಾತ್ರ ಆರ್.ಟಿ.ನಗರ ಖಾಸಗಿ ನಿವಾಸದಿಂದ ಮೌನವಾಗಿಯೇ ವಿಮಾನ ನಿಲ್ದಾಣದತ್ತ ತೆರಳಿದರು. ಇಂದು ಜಾಗತಿಕ ಬಂಡವಾಳ ಹೂಡಿಕೆದಾರ ರಾಷ್ಟ್ರಗಳ ರಾಯಭಾರಿಗಳ ಸಭೆಯಲ್ಲಿ ಭಾಗವಹಿಸಿಸಲಿರುವ ಸಿಎಂ ಸಭೆ ನಂತರ ದೆಹಲಿಯ ಕರ್ನಾಟಕ ಭವನದಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ರಾಜ್ಯಕ್ಕೆ ಮರಳುವ ಟಿಕೆಟ್ ಕಾಯ್ದಿರಿಸದೆ ವಾಪಸ್ ಬರುವ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿದ್ದು ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನ ನಡೆಸಲಿದ್ದಾರೆ. ಅವಕಾಶ ಸಿಕ್ಕಲ್ಲಿ ಹೈಕಮಾಂಡ್ ಜೊತೆ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಲಿದ್ದು, ಸಂಪುಟ ವಿಸ್ತರಣೆ ಇಲ್ಲವೆ ಪುನಾರಚನೆ ಕುರಿತು ಒಪ್ಪಿಗೆ ಪಡೆದುಕೊಂಡು ಬರಲಿದ್ದಾರೆ.
ದೆಹಲಿಯಿಂದ ಉತ್ತರ ಪ್ರದೇಶಕ್ಕೆ?: ಮೇ 13ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಪ್ರದೇಶದ ವಾರಣಾಸಿಗೆ ತೆರಳಲಿದ್ದು, ವಾರಣಾಸಿಯ ಜಂಗಮವಾಡಿಮಠದಲ್ಲಿ ನಡೆಯಲಿರುವ ಸನಾತನ ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಪೀಠದ ಉತ್ತರಾಧಿಕಾರಿ ಪಟ್ಟಾಭಿಷೇಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಹೈಕಮಾಂಡ್ ನಾಯಕರ ಭೇಟಿಗೆ ಅನುಮತಿ ಸಿಕ್ಕಲ್ಲಿ ಸಂಪುಟ ಕುರಿತು ಸಮಾಲೋಚನೆ ನಡೆಸಿ ಅಲ್ಲಿಂದಲೇ ಉತ್ತರ ಪ್ರದೇಶಕ್ಕೆ ತೆರಳುವ ಚಿಂತನೆ ಮಾಡಿದ್ದು, ವರಿಷ್ಠರ ಭೇಟಿ ಸಾಧ್ಯವಾಗದೆ ಇದ್ದಲ್ಲಿ ನಾಳೆ ಬೆಂಗಳೂರಿಗೆ ವಾಪಸ್ಸಾಗಿ 13ರಂದು ಬೆಳಗ್ಗೆ ಉತ್ತರ ಪ್ರದೇಶಕ್ಕೆ ತೆರಳಲಿದ್ದಾರೆ.
ಇದನ್ನೂ ಓದಿ: ಕುತೂಹಲ ಕೆರಳಿಸಿದ ಶರದ್ ಪವಾರ್ ಎರಡು ದಿನಗಳ ಬೆಳಗಾವಿ ಪ್ರವಾಸ