ಬೆಂಗಳೂರು: ಸ್ಯಾಂಡಲ್ವುಡ್ನ ಯುವರತ್ನ ಪುನೀತ್ ರಾಜ್‍ಕುಮಾರ್ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದ ಆವರಣದಲ್ಲಿ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂಜಾನೆ ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಹಣೆಗೆ ಮುತ್ತಿಟ್ಟು ಭಾವಪೂರ್ಣ ವಿದಾಯ ಕೋರಿದರು.
ಕಂಠೀರವ ಸ್ಟೇಡಿಯಂಗೆ ಆಗಮಿಸಿದ ಸಿಎಂ, ಪುನೀತ್ ಹಣೆಗೆ ಮುತ್ತಿಕ್ಕಿ ಕೆನ್ನೆ ಸವರಿದರು. ಈ ಸಂದರ್ಭದಲ್ಲಿ ಅವರು ಕೆಲಹೊತ್ತು ಭಾವುಕರಾದರು. ನಂತರ ಪಾರ್ಥಿವ ಶರೀರವನ್ನು ಚಿರಶಾಂತಿ ವಾಹನಕ್ಕೆ ಸ್ಥಳಾಂತರಿಸಲಾಯಿತು. ಅದಕ್ಕೂ ಮುನ್ನ ಪುನೀತ್ ರಾಜ್‍ಕುಮಾರ್ ಪತ್ನಿ ಹಾಗೂ ಮಗಳು ಅಂತಿಮ ನಮನ ಸಲ್ಲಿಸಿದರು. ಚಿರಶಾಂತಿ ವಾಹನದಲ್ಲಿ ಶಿವರಾಜ್ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಶಾಸಕ ರಾಜೂಗೌಡ ಉಪಸ್ಥಿತರಿದ್ದರು.
ಮುಂಜಾನೆಯವರೆಗೂ ಅಂತಿಮ ದರ್ಶನ:
ಅಪ್ಪು ಅಭಿಮಾನಿಗಳು ಮುಂಜಾನೆ 3 ಗಂಟೆಯವರೆಗೂ ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆದರು. ಬೆಳಗ್ಗೆ 3 ಗಂಟೆಯವರೆಗೆ ಪೊಲೀಸರು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದರು. ರಾತ್ರಿಪೂರ್ತಿ ಅಭಿಮಾನಿಗಳು ಸ್ಟೇಡಿಯಂಗೆ ಆಗಮಿಸಿ ಅಗಲಿದ ಅಪ್ಪುಗೆ ಅಂತಿಮ ಶ್ರದ್ಧಾಂಜಲಿ ಸಲ್ಲಿಸಿದರು.
ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಅಂತ್ಯಕ್ರಿಯೆ: ಕುಟುಂಬ ಸದಸ್ಯರು, ಗಣ್ಯರಿಗೆ ಮಾತ್ರ ಅವಕಾಶ