ಬೆಂಗಳೂರು: ಕೇವಲ ಚುನಾವಣೆ ಶುದ್ಧೀಕರಣವಾದರೆ ದೇಶ ಸುಧಾರಿಸುವುದಿಲ್ಲ. ಶೈಕ್ಷಣಿಕ, ಸಾಂಸ್ಕೃತಿಕ ರಂಗವೂ ಶುದ್ಧವಾಗಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ವಿಧಾನಸಭೆಯಲ್ಲಿ ಚುನಾವಣಾ ಸುಧಾರಣೆ ವೇಳೆ ಮಾತನಾಡುತ್ತಾ, ನಮ್ಮ ದೇಶ ಹಲವು ರೀತಿಯ ಹಿನ್ನೆಲೆ ಮತ್ತು ಇತಿಹಾಸ ಹೊಂದಿದೆ. ತಮಿಳುನಾಡಿನಿಂದ ದೇಶವನ್ನು ನೋಡುವ ದೃಷ್ಠಿಕೋನ ಬೇರೆ ಇದೆ. ಈಶಾನ್ಯ ರಾಜ್ಯಗಳ ದೃಷ್ಠಿಕೋನ ಬೇರೆ ಇದೆ. ಆದರೂ, ಎಲ್ಲರೂ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಬಂದಿದ್ದೇವೆ. ನಮ್ಮ ದೇಶದ ಜನರಲ್ಲಿ ಒಂದು ಅಂತರ್ಗತ ಶಕ್ತಿ ಇದೆ. ಬೇರೆ ಬೇರೆ ರಾಷ್ಟ್ರಗಳು ಒಂದೇ ರೀತಿಯ ವ್ಯವಸ್ಥೆ ಇದ್ದರೂ, ಪ್ರಜಾಪ್ರಭುತ್ವ ಬುಡಮೇಲಾಗಿದೆ. ನಮ್ಮ ದೇಶದಲ್ಲಿ ಅಧಿಕಾರ ಹಸ್ತಾಂತರ ಅತ್ಯಂತ ಶಾಂತಿಯುತವಾಗಿ ನಡೆಯುತ್ತದೆ. ಅಮೆರಿಕದಂತ ದೇಶದಲ್ಲಿ ಅಧಿಕಾರ ಹಸ್ತಾಂತರವಾಲು ಎಷ್ಟು ಕಷ್ಟವಾಯಿತು ಎನ್ನುವುದನ್ನು ನೋಡಿದ್ದೇವೆ ಎಂದು ವಿವರಿಸಿದರು.
ನಮ್ಮ ಪ್ರಜಾಪ್ರಭುತ್ವ ಗಟ್ಟಿಯಾಗಿರುವುದರಿಂದಲೇ ಚುನಾವಣೆ ಸುಧಾರಣೆ ಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ಹತಾಶರಾಗಬೇಕಿಲ್ಲ. ಹಾಗಂತ ಪರ್ಫೆಕ್ಟ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬೇಕಿಲ್ಲ. ಚುನಾವಣಾ ಅಕ್ರಮಗಳನ್ನು ತಡೆಯುವ ಪ್ರಯತ್ನ ನಡೆಸಬೇಕು ಎಂದು ಹೇಳಿದರು. ಕೆಲವು ವ್ಯಕ್ತಿಗಳು ಅಧಿಕಾರಕ್ಕೆ ಬರುವಾಗ ಇರುವ ತತ್ವ ಸಿದ್ಧಾಂತವನ್ನು ಅಧಿಕಾರಕ್ಕೆ ಬಂದ ನಂತರ ಅಧಿಕಾರದಲ್ಲಿ ಉಳಿಯಲು ತಮ್ಮ ತತ್ವ ಸಿದ್ಧಾಂತವನ್ನೇ ಬಲಿಕೊಟ್ಟಿರುವ ಹಲವು ಉದಾಹರಣೆಗಳು ಇವೆ. ಸುಪ್ರೀಂ ಕೋರ್ಟ್‍ನ ಅನೇಕ ಆದೇಶಗಳು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವಂತಹ ತೀರ್ಪುಗಳನ್ನು ನೀಡಿವೆ. ಈಗ ತಂತ್ರಜ್ಞಾನ ಬಂದು ಯುವಕರಿಗೆ ಪ್ರತಿಯೊಂದು ಮಾಹಿತಿ ನೇರವಾಗಿಯೇ ಸಿಗುತ್ತದೆ. ಸರಿಯೋ, ತಪ್ಪೊ ಜನರು ಎಲ್ಲದರ ಬಗ್ಗೆ ಮಾತನಾಡುವಂತೆ ಇದೆ. ವ್ಯವಸ್ಥೆ ಬದಲಾಗುವ ವಿಶ್ವಾಸ ಇದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಕೇವಲ ಜೀವಂತವಾಗಿದ್ದರೆ ಸಾಲದು, ಅದು ಆರೋಗ್ಯಕರವಾಗಿರಬೇಕು : ಪ್ರತಿಯೊಬ್ಬ ಮತದಾರನಿಗೂ ತನ್ನ ಮತ ಗೆಲ್ಲಬೇಕೆಂಬ ಹಂಬಲ ಇದ್ದೇ ಇರುತ್ತದೆ. ನಾವು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಆತಂಕದಿಂದ ಏನೇನೋ ಮಾಡುತ್ತೇವೆ. ನಮ್ಮದು ಪಕ್ಷ ಆಧಾರಿತ ಪ್ರಜಾಪ್ರಭುತ್ವ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾವೂ ಆಯ್ಕೆಯಾಗಬೇಕು. ಬಹಳ ಜನಪ್ರಿಯ ವ್ಯಕ್ತಿಯು ಜನರ ಆಯ್ಕೆಯಾಗುವುದಿಲ್ಲ. ಕೆಲವು ಸಾರಿ ಜನಪ್ರಿಯವಲ್ಲದ ವ್ಯಕ್ತಿಯು ಜನರ ಆಯ್ಕೆಯಾಗುತ್ತಾರೆ. ಕೆಳ ಹಂತದ ಮತದಾರ ತನ್ನ ಆತ್ಮಸಾಕ್ಷಿಯನ್ನು ಉಳಿಸಿಕೊಂಡಿದ್ದಾನೆ.
ಯುವಕರು ಹೊಸ ಹೊಸ ಆಲೋಚನೆ ಹೊಂದಿದ್ದಾರೆ. ವಿಶ್ವದಲ್ಲಿ ನಮ್ಮ ದೇಶ ಮುಂದೆ ಬರಬೇಕು ಎಂದು ಬಯಸುತ್ತಾರೆ. ಭ್ರಷ್ಟಾಚಾರ ಜನರನ್ನು ಭ್ರಷ್ಟರನ್ನಾಗಿ ಮಾಡುತ್ತಿದೆ. ಇದು ಅತಿಯಾದಾಗ ಇದನ್ನು ಬದಲಾಯಿಸುವ ಸಮಯ ಬಂದೇ ಬರುತ್ತದೆ. ಪ್ರಜಾಪ್ರಭುತ್ವ ಕೇವಲ ಜೀವಂತವಾಗಿದ್ದರೆ ಸಾಲದು. ಅದು ಆರೋಗ್ಯಕರವಾಗಿರಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಪೊರೇಟ್ ಡೊನೇಷನ್ 1970 ರ ವರೆಗೆ ಇರಲಿಲ್ಲ. ಆದರೆ, ಪ್ರಭಾವ ಇತ್ತು. ಬೇರೆ ಬೇರೆ ರೀತಿಯಲ್ಲಿ ನಿಯಂತ್ರಿಸುವ ಕೆಲಸ ಆಗಿನಿಂದಲೂ ಇದ್ದೇ ಇದೆ. ಈಗ ಅದರ ವಿಸ್ತಾರ ದೊಡ್ಡದಾಗಿದೆ. ಇದೆಲ್ಲ ನ್ಯೂನ್ಯತೆಗಳ ನಡುವೆ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಮಾಡಬೇಕು. ನಾವು ಜನಪರ ಆಡಳಿತ ನೀಡಿದರೆ, ಜನರು ಒಳ್ಳೆಯದಕ್ಕೆ ಬೆಲೆ ಕೊಡುತ್ತಾರೆ ಎನ್ನುವ ವಿಶ್ವಾಸ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಹೇಳಿದ್ದಾರೆ.
ಓದಿ : 72 ಗಂಟೆಯಲ್ಲಿ ಪಿಂಚಣಿದಾರರಿಗೆ ಮನೆ ಬಾಗಿಲಿಗೆ ಮಂಜೂರಾತಿ ಪತ್ರ : ಅಶೋಕ್