ಬೆಂಗಳೂರು : ಭಾರತ್ ಗೌರವ್ ಯೋಜನೆಯ ಮೂಲಕ ರಾಜ್ಯದಿಂದ ಕಾಶಿಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಹಾಯಧನವನ್ನು ನೇರವಾಗಿ ಡಿ.ಬಿ.ಟಿ. ಮೂಲಕ ಆನ್ಲೈನ್ನಲ್ಲಿ ವರ್ಗಾಯಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕಾಶಿಯಾತ್ರೆಯ ಸಹಾಯಧನ ವಿತರಣೆ ಮತ್ತು ಯಾತ್ರೆಯ ಮುಂಗಡ ಬುಕಿಂಗ್ ಮಾಡುವ ವೆಬ್ಸೈಟ್ ಉದ್ಘಾಟನೆ ಮಾಡಿದರು. ಇದೇ ವೇಳೆ ಕಾಶಿಯಾತ್ರೆ ಮುಗಿಸಿ ಬಂದ ಯಾತ್ರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.
ನಂತರ ಮಾತನಾಡಿದ ಸಿಎಂ, ಇದೊಂದು ಹೊಸ ಕಾರ್ಯಕ್ರಮ, ಇತ್ತೀಚೆಗೆ ಕಾಶಿಯನ್ನು ಪ್ರಧಾನಿ ಮೋದಿ ಸಂಪೂರ್ಣ ನವೀಕರಣ ಮಾಡಿದ್ದಾರೆ. ಇಷ್ಟು ವರ್ಷ ಕಾಶಿಗೆ ಯಾಕೆ ಬಂದೆವೋ ಎನ್ನಿಸುತ್ತಿತ್ತು. ಕಲುಷಿತ ನದಿ ದಂಡೆ, ಶುಚಿತ್ವವಿಲ್ಲದ ದೇವಾಲಯ ಆವರಣ, ಎಲ್ಲಾ ಕಡೆ ಅವ್ಯವಸ್ಥೆ ಇತ್ತು. ಆದರೆ ಈಗ ಎಲ್ಲ ಬದಲಾಗಿದೆ. ಘಾಟ್ಗಳನ್ನು ಸ್ವಚ್ಛ ಮಾಡಲಾಗಿದೆ. ಕಾಶಿ ಕಾರಿಡಾರ್ ಮಾಡಿದ್ದಾರೆ, ನದಿ ಸ್ವಚ್ಛವಾಗಿದೆ. ಕಾಶಿಯನ್ನು ನೋಡಿದರೆ ಭಕ್ತಿ ಭಾವ ಬರುವ ರೀತಿ ಪ್ರಧಾನಿ ಮೋದಿ ಬದಲಾಯಿಸಿದ್ದಾರೆ ಎಂದರು.
ಐದು ಸಾವಿರ ಸಹಾಯಧನ: ಹಿಂದೂಗಳ ಶ್ರದ್ಧಾ ಕೇಂದ್ರವಾದ ಕಾಶಿಗೆ ವಿಮಾನ, ರೈಲು, ಬಸ್ ಸಂಪರ್ಕ ಇದೆ. ಕಾಶಿಗೆ ತೆರಳಲು ಮೊದಲಿನಂತೆ ಈಗ ಕಷ್ಟವಿಲ್ಲ. ಹಾಗಾಗಿ ಕಾಶಿಗೆ ತೆರಳಲು ಭಕ್ತರಿಗೆ ಸಹಾಯ ಮಾಡಬೇಕು ಎಂದು ಭಾರತ್ ಗೌರವ್ ಯೋಜನೆ ರೂಪಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸ್ವೀಕಾರಕ್ಕೆ ವೆಬ್ಸೈಟ್ ಸಿದ್ಧವಾಗಿದೆ. ಐದು ಸಾವಿರ ರೂಪಾಯಿ ಸಹಾಯಧನ ಕೊಡಲಾಗುತ್ತದೆ. ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿಎಂ ಕರೆ ನೀಡಿದರು.
ಸುರಕ್ಷಿತ ರೈಲು ಪ್ರಯಾಣ ವ್ಯವಸ್ಥೆ: ಕಾಶಿಗೆ ಹೋಗದೆ ಕೇವಲ ಟಿಕೆಟ್ ತೋರಿಸಿ ಸಬ್ಸಿಡಿ ಪಡೆಯಲು ಸಾಧ್ಯವಿಲ್ಲ. ಹೋಗಿ ಬಂದವರು ಕಾಶಿಯ ಕರ್ನಾಟಕ ಭವನದಲ್ಲಿ ರಸೀದಿ ಪಡೆದಿರಬೇಕು. ಅಂತವರಿಗೆ ಮಾತ್ರ ಸಬ್ಸಿಡಿ ಕೊಡಲಾಗುತ್ತದೆ. ಕೇವಲ ಸಹಾಯಧನ ನೀಡುವುದು ಮಾತ್ರವಲ್ಲ, ಸುರಕ್ಷಿತವಾಗಿ ರೈಲಿನಲ್ಲಿ ಕರೆದೊಯ್ದು ಒಳ್ಳೆಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ ಸಿಎಂ, ಕಾಲಬೈರವೇಶ್ವರ ದರ್ಶನ ಮಾಡಿ ನಂತರ ವಿಶ್ವನಾಥನ ದರ್ಶನ ಪಡೆಯಬೇಕು. ಅದರಂತೆ ಕಾಶಿ ಯಾತ್ರೆ ಕೈಗೊಳ್ಳುವ ಎಲ್ಲ ಯಾತ್ರಿಕರಿಗೆ ಶುಭವಾಗಲಿ ಎಂದು ಹಾರೈಸಿದರು.
ಅತಿ ಹೆಚ್ಚು ಅನುದಾನ ನೀಡಿದ ಮುಖ್ಯಮಂತ್ರಿ: ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕಾಶಿ ಯಾತ್ರೆಗೆ ಐಟಿಎಂಎಲ್ ಮೂಲಕ ಅರ್ಜಿ ಸಲ್ಲಿಸಬೇಕು. ಸೇವಾ ಸಿಂಧು ಮೂಲಕವೂ ಅರ್ಜಿ ಸಲ್ಲಿಸಬಹುದು. ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗೆ ಕಳೆದ 10 ವರ್ಷಗಳಲ್ಲೇ ಅತೀಹೆಚ್ಚು ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಿಡುಗಡೆಗೊಳಿಸಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ದೇವಾಲಯಗಳ ಸಮಗ್ರ ಅಭಿವೃದ್ಧಿಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಜರಾಯಿ ಇಲಾಖೆಗೆ ಬಲ ತುಂಬಿದ್ದಾರೆ ಎಂದು ತಿಳಿಸಿದರು.
2022 – 23ರ ಆಯವ್ಯಯದಲ್ಲಿ ರಾಜ್ಯದಲ್ಲಿನ ವಿವಿಧ ದೇವಸ್ಥಾನಗಳು, ಮಠಗಳು ಹಾಗೂ ರಾಜ್ಯದ ಹೊರಭಾಗದಲ್ಲಿರುವ ಕರ್ನಾಟಕ ಛತ್ರಗಳ ಅಭಿವೃದ್ಧಿಗಾಗಿ ಒಟ್ಟು 421 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ. ಇದರ ಜೊತೆಗೆ ಮುಖ್ಯಮಂತ್ರಿ ವಿಧಾನಸಭಾ ಕ್ಷೇತ್ರವಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಇದುವರೆಗೆ (ಜುಲೈ 10, 2022 ರವರೆಗೆ) ಒಟ್ಟು 272 ಕೋಟಿ ರೂಪಾಯಿಗಳ ವಿಶೇಷ ಅನುದಾನ ಒದಗಿಸಿದ್ದು, ಅದರಲ್ಲಿ ಶೇ. 50ರಷ್ಟನ್ನು (136 ಕೋಟಿ ರೂ.) ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೂ ಒಟ್ಟು ರೂ. 693 ಕೋಟಿಗಳಷ್ಟು ಬೃಹತ್ ಗಾತ್ರದ ಅನುದಾನ ಒದಗಿಸಲಾಗಿದೆ ಎಂದರು.
ಕಳೆದ ಒಂದು ವರ್ಷದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಹಲವಾರು ನೂತನ ಯೋಜನೆಗಳನ್ನು ಘೋಷಣೆ ಮಾಡಿ ಅನುಷ್ಠಾನಗೊಳಿಸಲಾಗುತ್ತಿದೆ. ದೈವ ಸಂಕಲ್ಪ (ರೂ. 1140 ಕೋಟಿ ವೆಚ್ಚದಲ್ಲಿ 25 ಎ ದರ್ಜೆ ದೇವಾಲಯಗಳ ಸಮಗ್ರ ಅಭಿವೃದ್ಧಿ), ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅಳವಡಿಕೆ, ಕಾಯಕಲ್ಪ (ಮುಜರಾಯಿ ಇಲಾಖೆಯ ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ಧಿಗೆ ವಿಶೇಷ ಅನುದಾನ), ಇಲಾಖೆಯ ನೌಕರರು ಹಾಗೂ ಅರ್ಚಕರಿಗೆ ವಿಮಾ ಸೌಲಭ್ಯ, ತಸ್ತಿಕ್ ಹಣ ಹೆಚ್ಚಳದಂತಹ ಯೋಜನೆಗಳಿಗೆ ಮುಖ್ಯಮಂತ್ರಿಗಳು ಅಗತ್ಯ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಕೃಷಿ, ತೋಟಗಾರಿಕೆಗೆ ಉತ್ತೇಜನ ನೀಡಿದರೂ ಪರಿಪೂರ್ಣ ಯಶಸ್ಸು ಲಭಿಸಿಲ್ಲ: ನರೇಂದ್ರ ಸಿಂಗ್ ಥೋಮರ್