ಬೆಂಗಳೂರು: ಸ್ವಾತಂತ್ರ್ಯ ಬಂದು ನಾವೆಲ್ಲಾ 75 ವರ್ಷ ಕಳೆದಿದ್ದೇವೆ. ನಾವು ಹಿಂತಿರುಗಿ ನೋಡಬೇಕಾಗಿದೆ. ಮುಂದಿನ ನವ ಕರ್ನಾಟಕ ಕಲ್ಪನೆ ಬಿತ್ತಬೇಕಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಹಿನ್ನೆಲೆ ವಿಧಾನಸೌಧದ ಮುಂಭಾಗ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವತಂತ್ರ ದಿವಸವನ್ನು ಅರ್ಥಪೂರ್ಣ ವಿಭಿನ್ನವಾಗಿ ಆಚರಿಸಬೇಕೆಂದು ಕಲ್ಪನೆ ಇತ್ತು. ಕೋವಿಡ್ ಹಾಗೂ ಕರ್ಫ್ಯೂ ಇರುವ ಕಾರಣ ಕಾರ್ಯಕ್ರಮ ಮೊಟಕುಗೊಳಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಸ್ವಾತಂತ್ರ್ಯ ಸಾತ್ವಿಕ ಹೋರಾಟದಿಂದ ಬಂದಿದೆ. ಗೋಖಲೆ, ತಿಲಕ್, ವೀರ ಸಾವರ್ಕರ್ ಈ ಹಿನ್ನೆಲೆಯಿಂದ ಪ್ರಾರಂಭವಾಗಿ ಸ್ವಾಮಿ ವಿವೇಕಾನಂದ ಕೂಡ ಸ್ವಾತಂತ್ರ್ಯದ ವಿಚಾರ ಮಾತನಾಡಿದರು. ಸಾತ್ವಿಕ ಸತ್ಯವಾದ ಅಸ್ತ್ರವನ್ನ ಕೊಟ್ಟಿದ್ದು ಗಾಂಧೀಜಿ. ಮಧ್ಯರಾತ್ರಿ ಬಂದ ಸ್ವಾತಂತ್ರ್ಯವನ್ನು ಹಗಲಿರುಳು ಕಾಯಬೇಕು. ಪ್ರಜಾಪ್ರಭುತ್ವದ ಬುನಾದಿಯ ಮೇಲೆ ಮುನ್ನಡೆಯಬೇಕಾಗಿದೆ. ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಮುನ್ನಡೆಸೋಣ ಎಂದು ಸಿಎಂ ಕರೆ ನೀಡಿದರು.
ವಿಧಾನಸೌಧದ ಮುಂದೆ ಸಾಂಸ್ಕೃತಿಕ ಮೆರಗು
ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 10 ಕಲಾ ತಂಡಗಳು ಮನೋರಂಜನಾ ಕಾರ್ಯಕ್ರಮ ನೀಡಿದವು. ಬೇರೆ ಬೇರೆ ಜಿಲ್ಲೆಗಳಿಂದ ಬಂದ ಕಲಾತಂಡಗಳಿಂದ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಯಿತು.
ಧಾರವಾಡ ರಂಗಾಯಣ ಹಾಗೂ ಶಿವಮೊಗ್ಗ ರಂಗಾಯಣ ತಂಡದಿಂದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವಿದುರಾಶ್ವತ್ಥ, ದಂಡಿ ಸತ್ಯಾಗ್ರಹ, ಈಸೂರಿನ ಶೂರರು ಸೇರಿದಂತೆ ಹಲವು ನಾಟಕಗಳನ್ನು ಪ್ರಸ್ತುತಪಡಿಸಲಾಯಿತು.
ವಿಧಾನಸೌಧಕ್ಕೆ ಬಣ್ಣದ ಚಿತ್ತಾರ
75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಧಾನಸೌಧಕ್ಕೆ ವಿಶೇಷ ಮೆರಗು ನೀಡಲಾಗಿತ್ತು. ಶಕ್ತಿಸೌಧ ಬಣ್ಣಗಳಿಂದ ಕಂಗೊಳಿಸಿತು. ವಿಧಾನಸೌಧಕ್ಕೆ ಕೇಸರಿ, ಬಿಳಿ ಮತ್ತು ಹಸಿರು ಬೆಳಕಿನ ಚಿತ್ತಾರದೊಂದಿಗೆ ಸ್ಪರ್ಶ ನೀಡಲಾಗಿದೆ.
ಇದನ್ನೂ ಓದಿ: 75th Independence Day : ವಾಘಾ-ಅತ್ತಾರಿ ಬಾರ್ಡರ್ನಲ್ಲಿ ಬೀಟಿಂಗ್ ದಿ ರಿಟ್ರೀಟ್