ಬೆಂಗಳೂರು: ಜಾಗತಿಕ ವ್ಯಾಪಾರ ವಲಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಜೈನ ಸಮುದಾಯ ಫ್ಲಿಪ್ಕಾರ್ಟ್, ಅಮೆಜಾನ್ ಮಾದರಿಯಲ್ಲಿ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸರ್ ವೇದಿಕೆಯಡಿ ಜಾಗತಿಕ ಇ- ವಾಣಿಜ್ಯ ವ್ಯಾಪಾರ ಸಂಸ್ಥೆ ಸ್ಥಾಪಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಬೆಂಗಳೂರು ಅರಮನೆ ಮೈದಾನದ ಚಾಮರ ವಜ್ರ ಆವರಣದಲ್ಲಿ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ನಿಂದ ಎರಡು ದಿನಗಳ ಜೈನರ ಜಾಗತಿಕ ಶೃಂಗ ಸಭೆ - ಜಿತೋ ಗ್ರ್ಯಾಂಡ್ ಸಮ್ಮಿಟ್ ಉದ್ಘಾಟಿಸಿ ಮಾತನಾಡಿದ ಅವರು, ಜೈನ ಸಮುದಾಯ ವ್ಯಾಪಾರ ವಹಿವಾಟಿನಲ್ಲಿ ವಿಶೇಷ ಪರಿಣಿತಿ ಸಾಧಿಸಿದೆ. ಜಗತ್ತಿನಾದ್ಯಂತ ಅತ್ಯುತ್ತಮ ಸಂಪರ್ಕ ಜಾಲ ಹೊಂದಿದ್ದು, ಇ – ವಾಣಿಜ್ಯ ಮಾರುಕಟ್ಟೆ ಸಂಸ್ಥೆ ಸ್ಥಾಪಿಸಿದರೆ ಅದ್ಭುತ ಯಶಸ್ಸು ಸಾಧಿಸಬಹುದು. ಇದರಿಂದ ಬರುವ ಲಾಭವನ್ನು ಜೀತೋ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದು ಹೇಳಿದರು.
ಬೇರೆ ಸಮುದಾಯದವರು ವ್ಯಾಪಾರ ಮಾಡಲು ಹಣ ಎಷ್ಟಿದೆ ಎಂದು ನೋಡುತ್ತಾರೆ. ಜೇಬಿನಲ್ಲಿ ಹಣ ಇದ್ದರೆ ಮಾತ್ರ ವ್ಯಾಪಾರ ಮಾಡುತ್ತೇವೆ. ಇಲ್ಲವಾದಲ್ಲಿ ಯಾವುದಾದರೂ ಕೆಲಸ ನೋಡಿಕೊಳ್ಳುತ್ತೇವೆ. ಆದರೆ ಜೈನ ಸಮುದಾಯದವರು ಖಾಲಿ ಕೈಯಲ್ಲಿ ಉದ್ಯಮ, ವ್ಯಾಪಾರ ಆರಂಭಿಸುತ್ತಾರೆ. ಚಾಣಾಕ್ಷತನ, ಬದ್ಧತೆಯಿಂದ ಯಶಸ್ಸು ಸಾಧಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜೈನ ಸಮುದಾಯದವರು ಪರವೂರಲ್ಲಿ ನೆಲೆಸಿ ಎಲ್ಲರೊಂದಿಗೆ ಸೌಹಾರ್ದಯುತ ಬಾಂಧವ್ಯ ಬೆಳೆಸಿಕೊಂಡು ತಮ್ಮ ವ್ಯವಹಾರ ನಡೆಸುತ್ತಾರೆ. ಅಲ್ಲಿನ ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆತು ಹೋಗುತ್ತಾರೆ ಎಂದು ಶ್ಲಾಘಿಸಿದರು.
ಜೀತೋ ಸಂಘಟನೆಯಿಂದ ಕರ್ನಾಟಕದಲ್ಲಿ ವೈಜ್ಞಾನಿಕ ತಳಹದಿಯ ಶಿಕ್ಷಣ ಸಂಸ್ಥೆ ಆರಂಭಿಸಲು ತೀರ್ಮಾನಿಸಿರುವುದು ಉತ್ತಮ ಬೆಳವಣಿಗೆ, ಪದ್ಮಶ್ರೀ ಆಚಾರ್ಯ ಚಂದನಶ್ರೀ ಅವರ ಜತೆ ಚರ್ಚಿಸಿ ಪ್ರಸ್ತಾವನೆ ಸೂಕ್ತ ಸಲ್ಲಿಸಿದರೆ ಸರ್ಕಾರ ಅನುಮತಿ ನೀಡಲಿದೆ. ಜೈನ ಸಮುದಾಯದ ಯಾವುದೇ ರೀತಿಯ ರಚನಾತ್ಮಕ ಕೆಲಸಗಳಿಗೆ ಸರ್ಕಾರ ಬೆಂಬಲ ನೀಡಲಿದೆ ಎಂದರು.
ಓದಿ: ಯಾರಿಗೋ ಕಹಿಯಾಗುತ್ತೆ ಎಂದು ಹೆಡಗೇವಾರ್ ವಿಚಾರ ಕೈಬಿಡಲು ಸಾಧ್ಯವಿಲ್ಲ: ಸಚಿವ ಸುನಿಲ್ ಕುಮಾರ್