ಬೆಂಗಳೂರು : ಹಾನಗಲ್ ಮತ್ತು ಸಿಂದಗಿ ಉಪಚುನಾವಣಾ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜತೆಗೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯೂ ಅಲ್ಲ.
ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕಾರ ಮಾಡಿ ಮುಂದಿನ ದಿನಗಳಲ್ಲಿ ತಪ್ಪು ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಗೆ ತೆರಳುವ ಮುನ್ನ ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹುಬ್ಬಳ್ಳಿಗೆ ಹೋಗುತ್ತಿದ್ದೇನೆ. ಪ್ರತಿ ವರ್ಷ ದೀಪಾವಳಿಯನ್ನು ಹುಬ್ಬಳಿಯಲ್ಲಿ ಆಚರಿಸುತ್ತೇನೆ. ಇಂದು ಹಿರಿಯರ ಹಬ್ಬವಿದೆ. ಹಾಗಾಗಿ, ಇಂದು ಹಿರಿಯರ ಸಮಾಧಿಗೆ ಪೂಜೆ ಮಾಡಿ ದೀಪಾವಳಿ ಆಚರಿಸಿ ನಾಡಿದ್ದು (ಶುಕ್ರವಾರ) ವಾಪಸ್ ಬರಲಿದ್ದೇನೆ ಎಂದರು.
ಎರಡು ಕ್ಷೇತ್ರಗಳ ಉಪಚುನಾವಣೆ ಬಗ್ಗೆ ವಿವಿಧ ರೀತಿಯಲ್ಲಿ ವಿಶ್ಲೇಷಣೆ ಮಾಡುವುದು ಸಹಜ. ಒಂದು ಕಡೆ ಗೆಲುವಾಗಿದೆ ಮತ್ತೊಂದು ಕಡೆ ಸೋಲಾಗಿದೆ. ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವ ದೃಷ್ಟಿಕೋನ ನನ್ನದು. ಗೆಲುವಿಗೆ ಕಾರಣರಾದ ನಮ್ಮ ನಾಯಕರಿಗೆ, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೋಲಾದ ಕ್ಷೇತ್ರದ ಬಗ್ಗೆ ನಾವು ಆತ್ಮ ವಿಮರ್ಶೆ ಮಾಡುತ್ತಿದ್ದೇವೆ. ಸೋತಿರುವ ಈ ಅಂತರವನ್ನು ನಾವು ಸಾಧಿಸಬಹುದಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬರುವ ದಿನಗಳಲ್ಲಿ ಅವುಗಳನ್ನು ಸರಿಪಡಿಸಿ ಮುಂದೆ ಹೋಗಲಿದ್ದೇವೆ ಎಂದರು.
ಸೋಲಿಗೆ ಕಾರಣ: ನಮ್ಮ ಹಿರಿಯ ನಾಯಕ ಸಿಎಂ ಉದಾಸಿ ಅವರ ಬೇಸ್ ಅನ್ನು ನಾವು ಕ್ಷೇತ್ರದಲ್ಲಿ ಮುಂದುವರಿಸಿಕೊಂಡು ಹೋಗಲು ಸ್ವಲ್ಪಮಟ್ಟಿಗೆ ಆಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಕೊರೊನಾ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ, ಜನ ಅವರಿಗೆ ಮನ್ನಣೆ ಹಾಕಿದ್ದಾರೆ. ಫಲಿತಾಂಶದ ಕುರಿತು ಹೈಕಮಾಂಡ್‌ಗೆ ಪಕ್ಷದಿಂದ ಮಾಹಿತಿಯನ್ನ ಕೊಡಲಾಗಿರುತ್ತದೆ ಎಂದರು.
ಕಾಂಗ್ರೆಸ್ಗೆ ತಿರುಗೇಟು : ಈ ಫಲಿತಾಂಶ ಸರ್ಕಾರದ ಮೇಲೆ ಯಾವ ಪರಿಣಾಮ ಬೀರಲ್ಲ. ಈ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯೂ ಅಲ್ಲ. ದಿಕ್ಸೂಚಿ ಎಂದು ವಿಪಕ್ಷಗಳು ಹೇಳುವುದು ಸಹಜ. ಸಿಂದಗಿ ಫಲಿತಾಂಶ ಯಾವುದಕ್ಕೆ ದಿಕ್ಸೂಚಿ ಅಂತೆ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಸಿಂದಗಿಯಲ್ಲಿ 31 ಸಾವಿರ ಅಂತರದಿಂದ ಕಾಂಗ್ರೆಸ್ ಸೋತಿದೆ. ಅದನ್ನ ಅವರು ಮೊದಲು ನೋಡಿಕೊಳ್ಳಲಿ. ದಿಕ್ಸೂಚಿ ಸಿಂದಗಿಯಿಂದಲೇ ಆರಂಭ ಆಗಬೇಕು. ಹಿಂದೆ ಕಾಂಗ್ರೆಸ್ ನಂಜನಗೂಡು, ಗುಂಡ್ಲುಪೇಟೆಗಳಲ್ಲಿ ಗೆದ್ದಿತ್ತು. ಅದಾದ ಒಂದು ವರ್ಷದಲ್ಲಿ ಕಾಂಗ್ರೆಸ್ ಅವೆರಡೂ ಕ್ಷೇತ್ರ ಸೋತಿತು. ನಂತರ ರಾಜ್ಯದಲ್ಲೂ ಸೋತರು. ಒಂದು ಚುನಾವಣೆ ಅಲ್ಲಿನ ಹಲವು ಕಾರಣ, ಸ್ಥಳೀಯ ಕಾರಣಗಳಿಗೆ ಆಗುತ್ತದೆ. ಸತ್ಯಾಂಶ ಏನು ಎಂದರೆ ಅವರು ಸಿಎಂ ಇದ್ದಾಗಲೂ ಉಪಚುನಾವಣೆ ಸೋತಿದ್ದರು. ಉಪಚುನಾವಣೆಗಳಲ್ಲಿ ಸೋಲು ಗೆಲುವು ಸಹಜ ಎಂದರು.
ನೂರು ದಿನದ ಮಾಹಿತಿ ಜನರಿಗೆ ತಿಳಿಸುತ್ತೇವೆ : ಸರ್ಕಾರಕ್ಕೆ ನೂರು ದಿನವಾಗುತ್ತಿದೆ. ಆದರೆ, ಇದು ವಿಶೇಷವಲ್ಲ. ನೂರು ದಿನದಲ್ಲಿ ಏನು ಮಾಡಿದ್ದೇವೆ ಎಂದು ಚರ್ಚಿಸುವ ಕೆಲಸ ಮಾಡಬೇಕು. ನೂರು ದಿನ ಎನ್ನುವುದನ್ನು ಸರ್ಕಾರಕ್ಕೆ ವರ್ಷದ ರೀತಿಯ ಪ್ರಮುಖವಾದ ಘಟ್ಟ ಅಲ್ಲ. ಆದರೂ ನೂರು ದಿನದಲ್ಲಿ ಯಾವ ದಿಕ್ಕಿನಲ್ಲಿ ನಮ್ಮ ಸರ್ಕಾರ ಹೋಗುತ್ತಿದೆ?. ಯಾವ ಯಾವ ಸಮಸ್ಯೆಗಳನ್ನು ಎದುರಿಸಿದೆ ಎಂದು ವಿಸ್ತೃತವಾದ ಮಾಹಿತಿಯನ್ನು ಜನರಿಗೆ ಕೊಡುವ ಕೆಲಸವನ್ನು ಮಾಡುತ್ತೇವೆ ಎಂದರು.
ಬಿಟ್ ಕಾಯಿನ್ ದಂಧೆಯ ಪ್ರಭಾವಿಗಳ ಹೆಸರು ಬಹಿರಂಗಕ್ಕೆ ಸಿದ್ದರಾಮಯ್ಯ ಆಗ್ರಹ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಹೆಸರು, ದಾಖಲೆ ಬಹಿರಂಗ ವಿಚಾರದ ಪ್ರಶ್ನೆ ಇಲ್ಲ. ಅವರು ಆರೋಪ ಮಾಡಿದ್ದಾರೆ. ದಾಖಲೆ, ಹೆಸರು ಅವರು ಬಹಿರಂಗಪಡಿಸಬೇಕು. ನಾವು ಪ್ರಕರಣದ ಚಾರ್ಜ್‌ಶೀಟ್ ಅನ್ನು ಕೋರ್ಟ್‌ಗೆ ಸಲ್ಲಿಸಿದ್ದೇವೆ. ಇದು ಈಗ ಸಾರ್ವಜನಿಕ ದಾಖಲೆ ಆಗಿದೆ ಎಂದರು.
ದೀಪಾವಳಿ ಶುಭಾಷಯ: ನಾಡಿನ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.