ಬೆಂಗಳೂರು : ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣಾ ನೇತೃತ್ವ ವಹಿಸಲು ಪೂರಕವಾಗಿ ಜನ ಮನ್ನಣೆ ಗಳಿಸಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. ಇರುವ 20 ತಿಂಗಳ ಅವಧಿಯಲ್ಲಿ ಜನರನ್ನು ತಲುಪಲು ಅಲ್ಪಾವಧಿ ಯೋಜನೆಗಳ ಜಾರಿಗೆ ಒಲವು ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದೆ 20 ತಿಂಗಳ ಕಾಲಾವಕಾಶ ಮಾತ್ರವಿದೆ. ಒಂದು ಪೂರ್ಣ ಪ್ರಮಾಣದ ಮತ್ತೊಂದು ಚುನಾವಣಾ ಬಜೆಟ್ ಮಂಡಿಸಲು ಮಾತ್ರ ಅವಕಾಶವಿದೆ. ಅಲ್ಲಿಗೆ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಬೊಮ್ಮಾಯಿ ಅವರಿಗೆ ಸಿಗುವುದು ಕೇವಲ ಒಂದೇ ಒಂದು ಬಜೆಟ್ ಮಾತ್ರ.
ಚುನಾವಣಾ ಬಜೆಟ್ ಕೇವಲ ಘೋಷಣೆಗೆ ಮಾತ್ರ ಮಾಡಬಹುದಾಗಿದೆ. ಅನುಷ್ಠಾನಕ್ಕೆ ತರುವಷ್ಟು ಸಮಯವಿರುವುದಿಲ್ಲ. ಹಾಗಾಗಿ, 2022ರಲ್ಲಿ ಮಂಡಿಸಲಿರುವ ಬಜೆಟ್ ಬೊಮ್ಮಾಯಿ ಪಾಲಿಗೆ ಬಹಳ ಮಹತ್ವದ ಬಜೆಟ್ ಆಗಿದೆ. ಅದರಲ್ಲಿಯೇ ತಮ್ಮ ಜನಪ್ರಿಯತೆ ಕಂಡುಕೊಳ್ಳಬೇಕಿದೆ. ಹಾಗಾಗಿ, ದೀರ್ಘಾವಧಿಯ ಯೋಜನೆಗಳ ಬದಲು ಅಲ್ಪಾವಧಿ ಯೋಜನೆಗಳತ್ತ ಸಿಎಂ ಚಿತ್ತ ಹರಿಸಿದ್ದು, ಇದನ್ನೇ ಇಂದಿನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿಯೂ ಹೇಳಿದ್ದಾರೆ.
ಅಲ್ಪಾವಧಿ ಯೋಜನೆಗಳತ್ತ ಸಿಎಂ : ನಮ್ಮ ಅಧಿಕಾರಾವಧಿ 20 ತಿಂಗಳು ಮಾತ್ರ ಉಳಿದಿದೆ. ರಾಜ್ಯದ ಅಭಿವೃದ್ಧಿಗಾಗಿ ದೀರ್ಘಾವಧಿ ಮತ್ತು ಅಲ್ಪಾವಧಿಯ ಯೋಜನೆಗಳ ಅಗತ್ಯವಿದೆ. ಆ ನಿಟ್ಟಿನಲ್ಲಿಯೇ ನಾವು ಯೋಚಿಸುತ್ತೇವೆ. ಆದರೆ, ಅಲ್ಪಾವಧಿ ಯೋಜನೆಗಳನ್ನು ಶೇ.100ರಷ್ಟು ಅನುಷ್ಠಾನಕ್ಕೆ ತಂದೇ ತರುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಆ ಮೂಲಕ ಸರ್ಕಾರ ಅಲ್ಪಾವಧಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ ಎನ್ನುವ ಸ್ಪಷ್ಟ ಸಂದೇಶವನ್ನು ನಾಡಿನ ಜನತೆಗೆ ರವಾನಿಸಿದ್ದಾರೆ.
ಪ್ರಮುಖ ವಲಯದ ಮತ ಬುಟ್ಟಿಗೆ ಕೈ : ಎಸ್ಸಿ-ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ, ಮಹಿಳೆಯರು ಮತ್ತು ಯುವ ಸಮೂಹದ ತಲಾ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡುವ ಘೋಷಣೆ ಮೂಲಕ ಈ ಐದು ವರ್ಗದ ಮತ ಬುಟ್ಟಿಗೆ ಸಿಎಂ ಬೊಮ್ಮಾಯಿ ಕೈ ಹಾಕುತ್ತಿದ್ದಾರೆ. ಈಗಾಗಲೇ ಮೇಲ್ವರ್ಗದ ಮತ ಬುಟ್ಟಿಯನ್ನು ಭದ್ರಪಡಿಸಿಕೊಂಡಿರುವ ಬಿಜೆಪಿಗೆ ಮತ್ತೆ ಅಧಿಕಾರಕ್ಕೆ ಬರಲು ಇತರ ವರ್ಗಗಳ ಮತಗಳು ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಕಡೆ ವಾಲಬೇಕಿರುವುದು ಅನಿವಾರ್ಯ. ಹಾಗಾಗಿ, ಬೊಮ್ಮಾಯಿ ಅತಿ ಹೆಚ್ಚು ಮತದಾರರಿರುವ ಐದು ವರ್ಗಕ್ಕೆ ಕೈ ಹಾಕುತ್ತಿದ್ದಾರೆ.
ರೈತ, ಕಾರ್ಮಿಕರ ಓಲೈಕೆ : ರಾಜ್ಯದಲ್ಲಿ ರೈತ ಕೇಂದ್ರಿತ ಅಭಿವೃದ್ಧಿ ಮಾಡುವ ಚಿಂತನೆ ವ್ಯಕ್ತಪಡಿಸಿರಯವ ಸಿಎಂ, ರೈತನ ಶ್ರಮ ಕೂಲಿಕಾರನ ಬೆವರಿಗೆ ಬೆಲೆ ಕೊಡುವ ಅಭಯ ನೀಡಿದ್ದು, ಶ್ರಮಿಕ, ರೈತಾಪಿ ವರ್ಗವನ್ನು ಸೆಳೆಯಲು ಮುಂದಾಗಿದ್ದಾರೆ. ಅದೇ ರೀತಿ ಇನ್ವೆಸ್ಟ್ ಕರ್ನಾಟಕದ ಮೂಲಕ ವಿದೇಶಿ ಬಂಡವಾಳ ಆಕರ್ಷಿಸಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಮೂಲಕ ಕಾರ್ಮಿಕ ವರ್ಗವನ್ನು, ಉದ್ಯಮ ವಲಯವನ್ನು ಬಿಜೆಪಿಯತ್ತ ಸೆಳೆಯುವ ತಂತ್ರ ಅನುಸರಿಸುತ್ತಿದ್ದಾರೆ.
ಗಡಿ, ಜಲ ತಂಟೆಕೋರರಿಗೆ ಎಚ್ಚರಿಕೆ : ಕನ್ನಡ ನಾಡು, ನುಡಿ, ಜಲದ ವಿಚಾರದಲ್ಲಿ ರಾಜಿಯೇ ಇಲ್ಲ ಎಂದು ಗಡಿ ರಾಜ್ಯದ ತಂಟೆಕೋರರಿಗೆ ಚೊಚ್ಚಲ ಸ್ವಾತಂತ್ರ್ಯೋತ್ಸವ ಭಾಷಣದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಲ್ಲ ಮುಖ್ಯಮಂತ್ರಿಗಳ ರೀತಿಯಲ್ಲಿಯೇ ಬಸವರಾಜ ಬೊಮ್ಮಾಯಿ ಕೂಡ ಪ್ರಾದೇಶಿಕ ಅಸ್ಮಿತೆಗೆ ಮೊದಲ ಆದ್ಯತೆ ನೀಡಿದ್ದು, ಗಡಿ, ಭಾಷೆ, ಜಲ ವಿವಾದಗಳ ಬಗ್ಗೆ ರಾಜ್ಯದ ನಿಲುವು ಏನು ಎನ್ನುವ ಸಂದೇಶವನ್ನು ಮಾಣಿಕ್ ಷಾ ಪರೇಡ್ ಮೈದಾನದಿಂದಲೇ ನೆರೆ ರಾಜ್ಯಗಳಿಗೆ ನೀಡಿದ್ದಾರೆ. ಕೃಷ್ಣೆ, ಮಹದಾಯಿ, ಮೇಕೆದಾಟು ಯೋಜನೆಗಳನ್ನು ಪ್ರಸ್ತಾಪಿಸಿ ಯೋಜನೆಗಳ ಜಾರಿ ಬಗ್ಗೆ ಉಲ್ಲೇಖಿಸಿ ಕನ್ನಡಿಗರ ಮನಗೆಲ್ಲುವ ಭರವಸೆಗಳನ್ನು ಬಿತ್ತಿದ್ದಾರೆ.
ಬಿಎಸ್ವೈ ಅಸ್ತ್ರ ಪ್ರಯೋಗ : ನಿಕಟ ಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಚಲಿಸಿದ ಅಭಿವೃದ್ಧಿ ಪಥದಲ್ಲಿಯೇ ಮುಂದುವರೆಯುವ ಸಂಕಲ್ಪ ಮಾಡಿದ್ದೇನೆ. ಅವರ ಅಭಿವೃದ್ಧಿ ಕಾರ್ಯ ನಮಗೆ ಮಾರ್ಗದರ್ಶಿ ಆಗಿವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರ ಗುಣಗಾನ ಮಾಡಿದ ಬೊಮ್ಮಾಯಿ, ಯಡಿಯೂರಪ್ಪ ಅವರ ವಿಶ್ವಾಸದೊಂದಿಗೆ ಆಡಳಿತ ನೀಡುವ ಅಭಯ ನೀಡಿ ಬಿಎಸ್ವೈ ಅಭಿಮಾನಿಗಳನ್ನೂ ತಮ್ಮೊಂದಿಗೆ ಕೊಂಡೊಯ್ಯುವ ತಂತ್ರಗಾರಿಕೆ ಮೆರೆದಿದ್ದಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಮಾಸ್ ಲೀಡರ್ ಆಗಿದ್ದು, ಮಾಸ್ ಲೀಡರ್ ನೆರಳಿನಲ್ಲೇ ಜನಪ್ರಿಯತೆಯ ಉತ್ತುಂಗಕ್ಕೇರಲು ನಿರ್ಧರಿಸಿ ಬಿಎಸ್ವೈ ಮಾದರಿ ಆಡಳಿತ ಮುಂದುವರೆಸುವ ಘೋಷಣೆ ಮಾಡಿದ್ದಾರೆ.
ಟೀಕೆಯೇ ಮೆಟ್ಟಿಲು : ನನ್ನ ಬಗ್ಗೆ ಹಲವರು ಟೀಕೆ, ಅನುಮಾನ ವ್ಯಕ್ತಪಡಿಸಿದ್ದಾರೆ. ಅವುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ನಾಡಿನ ಅಭಿವೃದ್ಧಿ ಮಾಡುತ್ತೇನೆ ಎಂದು ರಬ್ಬರ್ ಸ್ಟ್ಯಾಂಪ್, ಬಿಎಸ್ ವೈ ನೆರಳು ಎಂದು ಟೀಕೆ ಮಾಡಿದ್ದವರಿಗೆ ತಿರುಗೇಟು ನೀಡುವುದನ್ನೂ ಸಿಎಂ ಮರೆಯಲಿಲ್ಲ. ಭವಿಷ್ಯದ ನಾಯಕತ್ವ ರೂಪಿಸುವ ಪ್ರಯೋಗಕ್ಕೆ ಮುಂದಾಗಿರುವ ಬಿಜೆಪಿ ಹೈಕಮಾಂಡ್ ಆಶಯದಂತೆ ಮುಂದಿನ ಚುನಾವಣಾ ನಾಯಕತ್ವ ವಹಿಸಿಕೊಳ್ಳಲು ಪೂರಕವಾಗಿ ಜನಪ್ರಿಯತೆಗಳಿಸಲು ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. ಅವರ ದೂರದೃಷ್ಟಿ ಯೋಜನೆಗಳು ಎಷ್ಟರ ಮಟ್ಟಿಗೆ ಫಲ ನೀಡಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.