ಹಾವೇರಿ: ತಾಲೂಕಿನಲ್ಲಿ ಬಿಜೆಪಿ ಸುನಾಮಿ ಇದೆ. ಈ ಸುನಾಮಿಯಲ್ಲಿ ಕಾಂಗ್ರೆಸ್ ಸಂಪೂರ್ಣ ಕೊಚ್ಚಿ ಹೋಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ನಡೆದ ರೋಡ್ ಶೋನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇವತ್ತು ಕೊನೆಯ ದಿನ. ಪ್ರಚಾರ ಕಾರ್ಯ ಮುಗಿದ ಮೇಲೆ ನಮ್ಮವರು ಮನೆ ಮನೆಗೆ ಹೋಗಿ ಪ್ರಚಾರ ಮಾಡಬಹುದು. ಉಳಿದೆರಡು ದಿನಗಳ ಕಾಲ ಪಕ್ಷದ ಪ್ರಾಬಲ್ಯವನ್ನ ಕಾಯೋ ಕೆಲಸ ನಮ್ಮ ಕಾರ್ಯಕರ್ತರು ಮಾಡಬೇಕು ಎಂದು ಸಲಹೆ ನೀಡಿದರು.
ಮತಗಳನ್ನು ಒಡೆಯೋ ಕೆಲಸ ಮಾಡ್ತಿದ್ದಾರೆ:
ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರೂ ಬಂದಿದ್ದಾರೆ. ಬಿಜೆಪಿ ಹವಾ ಒಡೆಯೋಕೆ ಚೀಲ ತಗೊಂಡು ಬಂದಿದ್ದಾರೆ. ಮತಗಳನ್ನ ಒಡೆಯೋ ಕೆಲಸ ಮಾಡ್ತಿದ್ದಾರೆ. ನೀವೆಲ್ಲ ನಿಮ್ಮ ನಿಮ್ಮ ಮತಗಟ್ಟೆಗಳಲ್ಲಿ ಕಾಯ್ದುಕೊಳ್ಳುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಸಿ.ಎಂ.ಉದಾಸಿ ಪ್ರಾಮಾಣಿಕ ಸೇವೆ
ದಿವಂಗತ ಸಿ.ಎಂ.ಉದಾಸಿಯವರ ಕ್ಷೇತ್ರವಿದು. ಹಗಲಿರುಳು ಉದಾಸಿಯವರು ಪ್ರಾಮಾಣಿಕ ಸೇವೆ ಮಾಡಿದರು. ಕಾಂಗ್ರೆಸ್ ಪಕ್ಷದ ಅಧಿಕಾರ ಇದ್ದಾಗ ರಸ್ತೆ, ನೀರಾವರಿ ಸೇರಿದಂತೆ ಅಭಿವೃದ್ಧಿ ಆಗಿರಲಿಲ್ಲ. ಉದಾಸಿಯವರು ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿ ಹೋಗಿದ್ದಾರೆ. ರೈತರು, ಕೂಲಿಕಾರರ ಪರ ನಿರಂತರ ಪ್ರಯತ್ನವಿತ್ತು. ಬೆಳೆ ವಿಮೆ ಹಣ ಪಡೆಯುವ ಬಗ್ಗೆ ರೈತರಿಗೆ ಹೇಳಿಕೊಟ್ಟವರು ದಿವಂಗತ ಉದಾಸಿಯವರು. ನಾನು ನೋಡ್ತಿದ್ದೆ. ಹಿಂದೆ 22, 23 ಕೋಟಿ ರೂ. ಬರುತ್ತಿತ್ತು. ನಮ್ಮ ತಾಲೂಕಿಗೆ ಕಡಿಮೆ ಬರೋದು. ಆಗ ಉದಾಸಿಯವರು ಕಾನೂನು ಪ್ರಕಾರ ಬೆಳೆ ವಿಮೆ ಹಣ ಪಡೆಯೋದು ಹೇಳಿದರು. ಆಮೇಲೆ ನಮ್ಮ ತಾಲೂಕಿಗೆ ಹಣ ಜಾಸ್ತಿ ಬಂತು ಎಂದು ನೆನಪಿಸಿದರು.
ಯಾರಿಗಾದ್ರೂ ಬೆಳೆ ವಿಮೆ ಕೊಡಿಸಿದ್ದಾರಾ?
ಸಿದ್ದರಾಮಯ್ಯ, ಕ್ಷೇತ್ರದಲ್ಲಿ ಯಾರಿಗಾದ್ರೂ ಬೆಳೆ ವಿಮೆ ಕೊಡಿಸೋ ಕೆಲಸ ಮಾಡಿದ್ದಾರಾ.? ಈಗ ಬರುವ ಕಾಂಗ್ರೆಸ್ ನಾಯಕರಿಗೆ ಕೇಳಿ. ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಎಷ್ಟು ಹಣ ಕೊಡಿಸಿದ್ದೀರಿ ಅಂತಾ?. ಅವರ ಬಳಿ ಉತ್ತರವಿಲ್ಲ. ನಾವೇನು ಮಾಡಿದ್ದೇವೆ ಅಂತಾ ಕೇಳುವ ಮುಂಚೆ ಕಾಂಗ್ರೆಸ್‌ನವರು ತಾವೇನು ಮಾಡಿದ್ದೀರಿ ಹೇಳಿ ಎಂದು ಸಿಎಂ ಪ್ರಶ್ನಿಸಿದರು.
ನಮ್ಮ ಕೆಲಸಗಳು ಮಾತಾನಾಡುತ್ತವೆ. ನಿರಂತರವಾಗಿ ಅಭಿವೃದ್ಧಿ ಕೆಲಸಗಳು ನಡಿಬೇಕು ಅಂದರೆ ಶಿವರಾಜ ಸಜ್ಜನರಗೆ ಮತ ಕೊಡಬೇಕು. ಕಾಂಗ್ರೆಸ್ ಪಕ್ಷ ಮಾತಿನಿಂದಲೇ ಜನರ ಹೊಟ್ಟೆ ತುಂಬಿಸುವುದು ಎಂದು ಲೇವಡಿ ಮಾಡಿದರು.
ಎಲ್ಲಿದೆ ಗರೀಬಿ ಹಠಾವೋ.?
ಮೊದಲು ಇಂದಿರಾ ಗಾಂಧಿ ಗರೀಬಿ ಹಠಾವೋ ಅಂದರು. ಅದು ಗರೀಬಿ ಕೋ ಹಠಾವೋ ಆಯ್ತು. ಎಲ್ಲಿದೆ ಗರೀಬಿ ಹಠಾವೋ.? '20 ಅಂಶಗಳ ಕಾರ್ಯಕ್ರಮ' ಎಂದರು. ಈಗೆಲ್ಲ ಭಾಗ್ಯಗಳ ಬಗ್ಗೆ ಮಾತನಾಡುತ್ತಾರೆ. ಅನ್ನನೂ ಮೋದಿಯದು, ಭಾಗ್ಯವು ಮೋದಿಯದು ಎಂದರು.
ಒಡೆದು ಆಳುವ ನೀತಿ:
ಒಂದೇ ಸಮುದಾಯಕ್ಕೆ ಶಾದಿ ಭಾಗ್ಯ. ಬೇರೆ ಸಮುದಾಯದಲ್ಲಿ ಬಡವರಿಲ್ವಾ?. ರಾಜಕಾರಣದಲ್ಲಿ ಒಡೆದು ಆಳುವ ನೀತಿಯ ಜತೆಗೆ ಓಲೈಕೆ ನೀತಿ ಅನುಸರಿಸುತ್ತಿದ್ದಾರೆ. ತಾಲೂಕಿಗೆ ಇಂತಿಷ್ಟು ಅಂತಾ ಕೊಟ್ಟರು. ಉಳಿದವರಿಗೆ ಸಿಗಲಿಲ್ಲ. ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯಕ್ಕೆ ಅನ್ಯಾಯ ಮಾಡಿದರು ಎಂದು ಬೊಮ್ಮಾಯಿ ದೂರಿದರು
ನಮಗೆ ವೋಟ್ ಬ್ಯಾಂಕ್ ಇದೆ 30 ಸಾವಿರ ಮತಗಳಿವೆ, ನಾವು ಗೆಲ್ತೇವೆ ಎನ್ನುತ್ತಿದ್ದಾರೆ. ನೀವು ಸಮಾಜ ಒಡೆಯುವ ಕೆಲಸ ಮಾಡಬೇಡಿ. ನೀವು ಸಮಾಜ ಜೋಡಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಎಲ್ಲರಿಗೂ ಸಮಾನ ಅವಕಾಶ ನೀಡುವುದು ನಿಜವಾದ ರಾಜನೀತಿ. ಅದನ್ನ ನಾವು ಪಾಲನೆ ಮಾಡುತ್ತಿದ್ದೇವೆ. ಜಾತಿ ಜಾತಿಗಳ ನಡುವೆ ಕಂದಕ ನಿರ್ಮಾಣ ಮಾಡಿ, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿ, ಅಧಿಕಾರದ ಅರಮನೆ ಕಟ್ಟುವ ಪ್ರಯತ್ನ ಮಾಡುವವರಿಗೆ ತಕ್ಕ ಪಾಠ ಕಲಿಸಿ ಎಂದು ಸಿಎಂ ಮನವಿ ಮಾಡಿದರು.
ಸಮರ್ಥವಾಗಿ ಕೋವಿಡ್ ನಿರ್ವಹಣೆ:
ಕೋವಿಡ್ ಮಹಾಮಾರಿ ಇಡೀ ಜಗತ್ತಿನಾದ್ಯಂತ ಬಂದಿದೆ. ಅದನ್ನ ಪ್ರಧಾನಿ ಮೋದಿ ಮತ್ತು ಅಂದಿನ ಸಿಎಂ ಯಡಿಯೂರಪ್ಪ ಸಮರ್ಥವಾಗಿ ಎದುರಿಸಿದ್ರು. ಎಲ್ಲರಿಗೂ ಉಚಿತ ಲಸಿಕೆ, ಚಿಕಿತ್ಸೆ ಕೊಡಿಸಿದರು. ಎಲ್ಲರೂ ಮೊದಲ ಮತ್ತು ಎರಡನೆ ಡೋಸ್ ಲಸಿಕೆ ಪಡೆಯಬೇಕು. ಕೋವಿಡ್ ವಿರುದ್ಧ ಕಾಂಗ್ರೆಸ್‌ನವರು ಕಿಟ್ ಕೊಟ್ಟಿದ್ದಾಗಿ ಹೇಳ್ತಾರೆ. ಮೆಕ್ಕೆಜೋಳ ಬೆಳೆಗಾರರು, ಆಟೋ ರಿಕ್ಷಾ, ಪೊಲೀಸರು ಸೇರಿದಂತೆ ಎಲ್ಲರಿಗೂ ಸಹಾಯ ಮಾಡಿದ್ದೇವೆ. ಅನೇಕ ಸಂಘ ಸಂಸ್ಥೆಗಳು ಈ ಕೆಲಸವನ್ನು ಮಾಡಿವೆ. ಯಾರೋ ಒಬ್ಬರು ಮಾಡಿದ್ದಾಗಿ ಹೇಳುತ್ತಿದ್ದಾರೆ.
ಇಂತಹ ಪೊಳ್ಳು ಮಾತುಗಳಿಗೆ ಒಳಗಾಗದೆ ನಮ್ಮ ಅಭ್ಯರ್ಥಿ ಗೆಲ್ಲಿಸಿ. ಶಿಗ್ಗಾಂವಿ ಮತ್ತು ಹಾನಗಲ್ ತಾಲೂಕು ಎರಡೂ ಒಂದೇ ಎಂದು ಅಭಿವೃದ್ಧಿ ಮಾಡುತ್ತೇನೆ. ನಿಮ್ಮ ಮತಕ್ಕೆ ಹೂವು ತರುತ್ತೇನೆ, ಹುಲ್ಲನ್ನಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದರು.