ಬೆಂಗಳೂರು: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಹಿನ್ನೆಲೆ, ಕುಮಾರ ಕೃಪ ರಸ್ತೆಯಲ್ಲಿರುವ ಖಾದಿ ಬಟ್ಟೆಗಳ ಮಾರಾಟ ಮಳಿಗೆ ಖಾದಿ ಎಂಪೋರಿಯಂಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಇವರಿಗೆ ಸಚಿವ ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ್ ಹಾಗೂ ಬಿ.ವೈ. ವಿಜಯೇಂದ್ರ ಸಾಥ್ ನೀಡಿದರು. ಮೊದಲಿಗೆ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ, ಬಳಿಕ ಖಾದಿ ವಸ್ತ್ರ ಖರೀದಿಸಿದರು.
ಖಾದಿ ಎಂಪೋರಿಯಂನಲ್ಲಿ ಜುಬ್ಬಾ ಹೊಲಿಸಲು ಖಾದಿ ಬಟ್ಟೆ ಖರೀದಿಸಿದ ಸಿಎಂ, ಇದೇ ವೇಳೆ ತಮ್ಮ ಪತ್ನಿ ಚೆನ್ನಮ್ಮರಿಗೆ ಸಿಲ್ಕ್ ಸೀರೆಯನ್ನು ತಾವೇ ಆರಿಸಿ ಖರೀದಿಸಿದರು. ಸೀರೆ ಖರೀದಿ ವೇಳೆ ವಿಜಯೇಂದ್ರ ಆಗಮಿಸಿ, ಏನ್ ಸೀರೆ ಖರೀದಿ ಜೋರಾ ಎಂದಾಗ, ಸಿಎಂ ನಮ್ಮದು ಮುಗಿತು ಈಗ ನೀವು ತಗೊಳಿ ಎಂದು ಕಾಲೆಳೆದರು. ಬಳಿಕ ವಿಜಯೇಂದ್ರ ಕೂಡ ಸೀರೆ ಖರೀದಿ ಮಾಡಿದರು.
ಇದನ್ನೂ ಓದಿ: ಗಾಂಧಿ - ಶಾಸ್ತ್ರಿ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ: ಸಿಎಂ ಕರೆ
ಇನ್ನು ಪಕ್ಕದಲ್ಲೇ ಇದ್ದ ಗೋವಿಂದ ಕಾರಜೋಳರಿಗೆ ಸಾಹೇಬ್ರೆ ನೀವು ಸೀರೆ ಖರೀದಿಸಿ ಎಂದಾಗ, ಬೇಡ ಸೀರೆ ಖರೀದಿ ಬಗ್ಗೆ ನನಗೆ ಗೊತ್ತಿಲ್ಲ ಅಂತ ಕಾರಜೋಳ ಜಾರಿಕೊಂಡರು. ಆಗ ಸಿಎಂ ಕಣ್ಣು ಮುಚ್ಚಿ ಕೈಗೆ ಸಿಕ್ಕಿದ್ದು ತಗೊಂಡು ಹೋಗಿ ಅಷ್ಟೇ ಎಂದ್ರು.
ಖಾದಿ ಎಂಪೋರಿಯಂನಲ್ಲಿ ಖರೀದಿಯ ವಿವರ:
- ಸಿಎಂ ಬಸವರಾಜ ಬೊಮ್ಮಾಯಿ ಅವರ ಬಿಲ್ - 16,031/-
- ಎಂಟಿಬಿ ನಾಗರಾಜ್ ಅವರ ಬಿಲ್ - 3000/-
- ಬಿ.ವೈ.ವಿಜಯೇಂದ್ರ ಅವರ ಬಿಲ್ - 4300/-