ಬೆಂಗಳೂರು : ಕ್ರೈಸ್ತರ ಪವಿತ್ರ ಕ್ರಿಸ್ಮಸ್ ಹಬ್ಬ ಇಂದು ಅದ್ಧೂರಿಯಾಗಿ ಜರುಗಲಿದೆ. ನಗರದ ಶಾಪಿಂಗ್ ಮಾಲ್ಗಳು ಭರ್ಜರಿ ಲೈಟಿಂಗ್ನೊಂದಿಗೆ ಅಲಂಕೃತಗೊಂಡಿದ್ದರೆ, ಇತ್ತ ಎಲ್ಲಾ ಚರ್ಚ್ಗಳಲ್ಲೂ ಕ್ರಿಸ್ ಮಸ್ ಆಚರಣೆಗೆ ಭರ್ಜರಿ ಸಿದ್ಧತೆಯಾಗಿದೆ. ಒಮಿಕ್ರಾನ್ ನಡುವೆಯೂ ಹಬ್ಬ ಆಚರಿಸಲು ಷರತ್ತುಬದ್ಧ ಅನುಮತಿಯನ್ನು ಸರ್ಕಾರ ನೀಡಿದೆ. ಅದ್ಧೂರಿಯಾಗಿ ಆಚರಣೆ ಅಲ್ಲದಿದ್ದರೂ ಚರ್ಚ್ಗಳಲ್ಲಿನ ವಿಶೇಷವಾದ ಪ್ರಾರ್ಥನೆಗಳಿಗೆಲ್ಲಾ ಅನುಮತಿ ನೀಡಲಾಗಿದೆ. ಆದರೆ ಒಮಿಕ್ರಾನ್ ಹಾವಳಿ ಇರುವುದರಿಂದ ಬಿಬಿಎಂಪಿ ನಗರದ ಮೇಲೆ ಹದ್ದಿನ ಕಣ್ಣಿಡಲು ತೀರ್ಮಾನಿಸಿದೆ.
ರಾಜ್ಯಾದ್ಯಂತ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಜನರು ಒಂದೆಡೆ ಸೇರುವಂತಿಲ್ಲ ಜೊತೆಗೆ ಕೋವಿಡ್ ನಿಯಮ ಪಾಲನೆ ಕಡ್ಡಾಯ. ಮಾರ್ಗಸೂಚಿಯನ್ನ ಯಥಾವತ್ತಾಗಿ ಜಾರಿಗೆ ತರುವ ಜವಾಬ್ದಾರಿಯನ್ನು ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು, ಎಸ್ಪಿಗಳ ಹೆಗಲಿಗೆ ಹಾಕಲಾಗಿದೆ. ಸರ್ಕಾರದ ಮಾರ್ಗಸೂಚಿಯನ್ನ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.
ಅಲ್ಲದೆ, ಚರ್ಚನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುವಾಗ ಕೋವಿಡ್ ರೂಲ್ಸ್ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಕ್ರಿಸ್ ಮಸ್ ಆಚರಣೆಗೆ ಸಾರ್ವಜನಿಕ ಸ್ಥಳ, ರಸ್ತೆ, ಪಾರ್ಕ್ ಇತ್ಯಾದಿಗಳನ್ನ ಬಳಸಿಕೊಳ್ಳುವ ಹಾಗಿಲ್ಲ. ಈ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿಕೊಡು ಎಂದಿನಂತೆ ಚರ್ಚ್ಗಳಲ್ಲಿ ಪ್ರಾರ್ಥನೆ ನೆರವೇರಲಿದೆ. ಆದರೆ ಜನರನ್ನು ನಿಗದಿತವಾಗಿ ಸೇರಿಸಿ ಪ್ರಾರ್ಥನೆ ಸಲ್ಲಿಸಿ ಎಂದು ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.
ಮಾರ್ಷಲ್ಗಳ ನಿಯೋಜನೆ : ನಗರದ ಪ್ರಮುಖ ಎಲ್ಲಾ ಚರ್ಚ್ಗಳ ಬಳಿ ಮಾರ್ಷಲ್ಗಳನ್ನು ನಿಯೋಜನೆ ಮಾಡಿ, ಜನ ದಟ್ಟಣೆಯನ್ನು ಪಾಲಿಕೆ ನಿಯಂತ್ರಿಸಲಿದೆ. ಇದಕ್ಕೆಂದೇ ವಿಶೇಷವಾಗಿ ಮಾರ್ಷಲ್ಗಳ ತಂಡ ರಚನೆಯಾಗಲಿದ್ದು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿರುವಂತೆ ನೋಡಕೊಳ್ಳಲಿದೆ.
ನಗರದ ಪ್ರಮುಖ ಚರ್ಚ್ ಗಳಿಗೆ ಪಾಲಿಕೆ ಸುತ್ತೋಲೆ : ಈಗಾಗಲೇ ನಗರದ ಎಲ್ಲಾ ಚರ್ಚ್ಗಳಿಗೂ ಈ ಬಗ್ಗೆ ಪಾಲಿಕೆ ಸುತ್ತೋಲೆ ನೀಡಿ ಒಮಿಕ್ರಾನ್ ತಡೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡೇ ಪ್ರಾರ್ಥನೆ ಕೈಗೊಳ್ಳಿ ಎಂದು ಮನವಿ ಮಾಡಿದೆ. ಅಗತ್ಯ ಸಹಾಯ ಬೇಕಿದ್ದರೆ ಬಿಬಿಎಂಪಿ ವಾರ್ಡ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಹೇಳಿದೆ. ಒಟ್ಟಾರೆ ಒಮಿಕ್ರಾನ್ ನಡುವೆ ಆಚರಿಸಲಾಗುತ್ತಿರುವ ಕ್ರಿಸ್ಮಸ್ ಹಬ್ಬಕ್ಕೆ ಇಡೀ ಬೆಂಗಳೂರು ಸಿದ್ಧಗೊಂಡಿದೆ.