ಬೆಂಗಳೂರು: ಜೀವನಕ್ಕೆ ಆಧಾರವಾಗುವ ಜೊತೆಗೆ ಮಕ್ಕಳ ವ್ಯಕ್ತಿತ್ವ ರೂಪಿಸುವ ಶಿಕ್ಷಣ ವ್ಯವಸ್ಥೆ ಇದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ನಿಯಮ 68ರ ಅಡಿ ರಾಜ್ಯದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವ ಕುರಿತು ಅವರು ಮಾತನಾಡಿದ್ರು. ಇಂದು ನೈತಿಕ ಶಿಕ್ಷಣ ನೀಡುವ ಕಾರ್ಯ ಆಗುತ್ತಿಲ್ಲ. ಅಂಕ ಆಧಾರಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದೆ. ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಮೈಸೂರಿನಲ್ಲಿ ನಡೆದಿರುವ ಘಟನೆಗೆ ಗೃಹ ಸಚಿವರು ಆ ಹೆಣ್ಣು ಮಗಳು ಅಲ್ಲಿ ಏಕೆ ಹೋಗಬೇಕು ಎಂದಿದ್ದೇ ದೊಡ್ಡ ಚರ್ಚೆ ಆಯಿತು. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ಇದೇ ಯೋಚನೆ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲೆ, ಕಾಲೇಜುಗಳಲ್ಲಿ ಅಂಕ ಗಳಿಸುವುದರ ಬಗ್ಗೆಯೇ ಗಮನ ಹರಿಸುವುದರಿಂದ ನೈತಿಕ ಶಿಕ್ಷಣದ ಕೊರತೆ ಎದುರಾಗಿದೆ. ಇದರಿಂದ ಉತ್ತಮ ಶಿಕ್ಷಣ ನೀಡುವಲ್ಲಿ ನಾವು ಹಿನ್ನಡೆ ಅನುಭವಿಸಿದ್ದೇವೆ. ಅದು ಸರಿಯಾಗಬೇಕು. ನಿರಂತರವಾಗಿ ಎಲ್ಲಾ ವರ್ಗದ ಮಹಿಳೆಯರ ಮೇಲೆ ಅವರು ಕಾರ್ಯನಿರ್ವಹಿಸುವ ತಾಣದಲ್ಲಿ ಅತ್ಯಾಚಾರ, ದೌರ್ಜನ್ಯ ನಡೆಯುತ್ತಲೇ ಇದೆ. ರಾತ್ರಿವೇಳೆ ಮಹಿಳೆಯರು ಕಾರ್ಯನಿರ್ವಹಿಸುವ ಅವಕಾಶವನ್ನು ಸರ್ಕಾರ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಅತ್ಯಾಚಾರಿಗೆ ಕಠಿಣ ಶಿಕ್ಷೆ ಆಗಲಿದೆ ಎನ್ನುವ ಅರಿವು ಮೂಡುವ ಮಾದರಿ ಶಿಕ್ಷೆ ಆಗಬೇಕು. ಕಠಿಣಾತಿ ಕಠಿಣ ಶಿಕ್ಷೆ ಆಗಬೇಕು. ವಿಶೇಷ ಕಾನೂನು ರಚನೆ ಆಗಬೇಕು. ಹೆಣ್ಣುಮಕ್ಕಳ ಕೂಗು ಕೇವಲ ಅರಣ್ಯರೋಧನ ಆಗಬಾರದು. ಅನೇಕ ಪ್ರಕರಣಗಳು ದಾಖಲಾಗುವುದೇ ಇಲ್ಲ. ನಿರ್ಭಯಾ ಪ್ರಕರಣ ನಂತರ ದೂರು ದಾಖಲಿಸಿಕೊಳ್ಳದವರ ವಿರುದ್ಧ ಕೇಸ್ ದಾಖಲಿಸಬಹುದು ಅಂತ ಇದೆ. ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಸರ್ಕಾರ ಕಾನೂನು ರೂಪಿಸಬೇಕು ಎಂದರು.
ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ಇರುವ ಕಾನೂನು ಚೆನ್ನಾಗಿದೆ. ಆದರೆ ಇದು ನ್ಯಾಯಾಲಯದಲ್ಲಿ ಏಕೆ ಬಿದ್ದು ಹೋಗಲಿದೆ ಎನ್ನುವುದನ್ನು ಗಮನಿಸಬೇಕು ಎಂದು ಸಲಹೆ ನೀಡಿದರು.