ಬೆಂಗಳೂರು: ವಿಜ್ಞಾನಿ ನಾಗರಾಜ್ ಹೆಗಡೆ ಅಭಿವೃದ್ಧಿಪಡಿಸಿದ ಗೊಬ್ಬರ ತಯಾರಿಕಾ ಯಂತ್ರ 'ಭೂಸಿರಿ' ಹಾಗೂ ಮಣ್ಣು ಪರೀಕ್ಷಿಸುವ 'ಭೂ ಮಿತ್ರ' ಉಪಕರಣಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಹಸಿ ಮತ್ತು ಒಣ ತ್ಯಾಜ್ಯವನ್ನು ತಕ್ಷಣ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಭೂ ಸಿರಿ ಹಾಗೂ ತಕ್ಷಣ ಮಣ್ಣು ಪರೀಕ್ಷಿಸುವ ಭೂ ಮಿತ್ರ ಉಪಕರಣವನ್ನು ಅತ್ಯಂತ ಸಂತೋಷದಿಂದ ಲೋಕಾರ್ಪಣೆ ಮಾಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾವಯವ ಬೇಸಾಯ ಪದ್ಧತಿಯು ಸಂಪ್ರದಾಯ, ನಾವೀನ್ಯತೆ ಮತ್ತು ವಿಜ್ಞಾನವನ್ನು ಒಳಗೊಂಡು ಪರಿಸರದಲ್ಲಿರುವ ಜೀವಿಗಳೊಂದಿಗೆ ಉತ್ತಮ ಸಂಬಂಧವನ್ನು ಏರ್ಪಡಿಸುತ್ತದೆ. ರಾಸಾಯನಿಕಗಳ ಬಳಕೆ, ಅವೈಜ್ಞಾನಿಕ ಸಾಗುವಳಿ ಪದ್ಧತಿಗಳಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದ್ದು, ಕೃಷಿ ಭೂಮಿ ಬರಡಾಗುತ್ತಿದೆ. ಮಣ್ಣಿನ ಫಲವತ್ತೆ ಉಳಿಸಲು ಸಾವಯವ ಕೃಷಿ ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು.
ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲು ಹಾಗೂ ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸಾವಯವ ಕೃಷಿ ನೀತಿ ರೂಪಿಸಿದ ಮೊದಲ ರಾಜ್ಯ ಕರ್ನಾಟಕ ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ರೈತರ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಈ ಯಂತ್ರಗಳು ಸಹಕಾರಿಯಾಗಲಿವೆ ಎಂದರು.
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ಹೈಟೆಕ್ ಅಗ್ರಿಕ್ಯೂಲಂ ಸಂಸ್ಥೆಯ ಅಧ್ಯಕ್ಷ ಡಾ.ನಾಗರಾಜ್ ಹೆಗಡೆ ಕಾರ್ಯಕ್ರಮದಲ್ಲಿ ಇದ್ದರು.