ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ನಿರ್ಧಾರ ವರಿಷ್ಠರಿಗೆ ಬಿಟ್ಟಿದ್ದು, ನಾನು ಜುಲೈ 24 ರಂದು ದಿಲ್ಲಿಗೆ ಹೋಗುತ್ತಿದ್ದೇನೆ. ಆ ಸಂದರ್ಭದಲ್ಲಿ ವರಿಷ್ಠರು ಏನಾದರೂ ಹೇಳುತ್ತಾರೆ ಎಂದು ನೋಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಹೇಳ್ತೀವಿ ಅಂತ ವರಿಷ್ಠರು ಹೇಳಿದ್ದಾರೆ. 24ನೇ ತಾರೀಖು ದೆಹಲಿಗೆ ಹೋಗುತ್ತೇನೆ. ಜುಲೈ 25-26 ದಿಲ್ಲಿಯಲ್ಲೇ ಇರುತ್ತೇನೆ. ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಇದೆ. ಜೊತೆಗೆ ಕೆಲವು ಇಲಾಖೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಕಸ್ತೂರಿ ರಂಗನ್ ವರದಿ ಸಂಬಂಧ ನಿಯೋಗ ಕೊಂಡೊಯ್ಯುತ್ತಿದ್ದೇನೆ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತಾವೇ ಹೇಳುವುದಾಗಿ ತಿಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈಶ್ವರಪ್ಪಗೆ ಕ್ಲೀನ್‌ಚಿಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪೊಲೀಸ್ ಇಲಾಖೆಯವರು ತನಿಖೆ ಮಾಡಿ ಬಿ ರಿಪೋರ್ಟ್ ಕೊಟ್ಟಿದ್ದಾರೆ. ವರದಿ ಕೋರ್ಟ್ ಮುಂದೆ ಸಲ್ಲಿಕೆಯಾಗುತ್ತದೆ ಎಂದರು.
ಸರಿಯಾದ ತನಿಖೆ ನಡೆದಿಲ್ಲ, ಬಿ ರಿಪೋರ್ಟ್ ಮೊದಲೇ ತೀರ್ಮಾನವಾಗಿತ್ತು ಎಂಬ ಡಿಕೆಶಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಚ್ ವೈ ಮೇಟಿ ಪ್ರಕರಣದಲ್ಲಿ ಕಾಂಗ್ರೆಸ್ನವರು ಎಫ್ಐಆರ್ ಹಾಕಲೇ ಇಲ್ಲ. ಎಫ್ಐಆರ್ ಹಾಕದೇ ಬಿ ರಿಪೋರ್ಟ್ ಕೊಟ್ಟರು. ಅದು ಮೊದಲೇ ತೀರ್ಮಾನ ಮಾಡಿದ್ದು. ಇದರಲ್ಲಿ ನಾವು ಎಫ್ಐಆರ್ ಹಾಕಿ ತನಿಖೆ ಮಾಡಿ, ಸಾಕ್ಷ್ಯಾಧಾರ ಪರಿಶೀಲಿಸಿ ಮಾಡಿದ್ದೇವೆ. ಎಚ್ ವೈ ಮೇಟಿ ಪ್ರಕರಣದಲ್ಲಿ ನೇರವಾಗಿ ವಿಡಿಯೋ ಸಾಕ್ಷ್ಯ ಇದ್ರೂ ಎಫ್ಐಆರ್ ಹಾಕ್ಲಿಲ್ಲ. ಅದನ್ನು ಡಿಕೆಶಿ ಮರೆತಿದ್ದಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಈ ವರ್ಷವೇ ಕಬಿನಿ ಜಲಾಶಯದ ಉದ್ಯಾನ ಆರಂಭ: ಸಿಎಂ ಭರವಸೆ