ಬೆಂಗಳೂರು : ಸದಾ ಒಂದಿಲ್ಲೊಂದು ಚಟುವಟಿಕೆಗಳಿಂದ ಗಮನ ಸೆಳೆಯುವ ಸಿಲಿಕಾನ್ ಸಿಟಿಯಲ್ಲಿ ವೀಕೆಂಡ್ ದಿನವಾದ ಇಂದು ಮುಂಜಾನೆ ಮ್ಯಾರಥಾನ್ ಗಮನ ಸೆಳೆಯಿತು. ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಟಿಸಿಎಸ್ ಸಂಸ್ಥೆ ಆಯೋಜಿಸಿದ್ದ ವಿಶ್ವ ಪ್ರೀಮಿಯರ್ 10ಕೆ ಮ್ಯಾರಥಾನ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಬೆಳಗ್ಗೆ 8 ಗಂಟೆಗೆ ಆರಂಭವಾದ ಓಟಕ್ಕೆ ಚಾಲನೆ ನೀಡಿದ ಸಿಎಂ, ಓಟ ಮುಗಿಯುವವರೆಗೂ ಇದ್ದು ಕುತೂಹಲದಿಂದ ಕ್ರೀಡೆ ವೀಕ್ಷಣೆ ಮಾಡಿದರು. ನಂತರ ಗೆದ್ದ ಸ್ಪರ್ಧಿಗಳಿಗೆ ಪದಕ ಪ್ರದಾನ ಮಾಡಿ, ಭವಿಷ್ಯದ ಸ್ಪರ್ಧೆಗಳಿಗೆ ಶುಭ ಕೋರಿ ಪ್ರೋತ್ಸಾಹ ನೀಡಿದರು. 10ಕೆ ಮ್ಯಾರಥಾನ್ನಲ್ಲಿ 17 ಸಾವಿರಕ್ಕಿಂತ ಹೆಚ್ಚು ಜನ ಭಾಗವಹಿಸಿದ್ದರು. ಹಿರಿಯರು, ವಿಕಲಚೇತನರು ತಮ್ಮ ಜೀವನೋತ್ಸಾಹಕ್ಕೆ ಓಡಿದರು.
ನಂತರ ಮಾತನಾಡಿದ ಬೊಮ್ಮಾಯಿ, ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಟಿಸಿಎಸ್ ಉತ್ತಮ ಕೆಲಸ ಮಾಡುತ್ತಿದೆ. ಅನೇಕ ಸರ್ಕಾರೇತರ ಸಂಸ್ಥೆಗಳು ಈ ವೇದಿಕೆಯ ಮೂಲಕ ತಮ್ಮ ಸಾಮಾಜಿಕ ಕೆಲಸಕ್ಕೆ ದೇಣಿಗೆ ಸಂಗ್ರಹಿಸಲು ಅವಕಾಶ ಕಲ್ಪಿಸಿಕೊಟ್ಟು, ಸಾಮಾಜಿಕ ಹೊಣೆಗಾರಿಕೆಯನ್ನು ಟಿಸಿಎಸ್ ಸಂಸ್ಥೆ ತೋರಿದೆ ಎಂದರು. ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ, ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಡಾ. ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ತ್ರಿಪುರಾದ 11ನೇ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಪದಗ್ರಹಣ