ಬೆಂಗಳೂರು: ಮಳೆಗಾಲ ಆರಂಭವಾಗ್ತಿರೋದ್ರಿಂದ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಸಿದ್ಧತೆ ಹೇಗಿದೆ ಎಂದು ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಇಂದು ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದರು. ಆರಂಭದಲ್ಲಿ ಗಾಳಿ ಆಂಜನೇಯ ದೇವಸ್ಥಾನದ ಸಮೀಪ, ಎರಡು ಸೇರುವ ಜಾಗದಲ್ಲಿ ಕವಿಕಾ ಸಂಸ್ಥೆ ಮತ್ತು ದೇವಸ್ಥಾನಕ್ಕೆ ನೀರು ನುಗ್ಗುತ್ತಿತ್ತು. ಇದೀಗ ರಾಜಕಾಲುವೆ ಅಭಿವೃದ್ಧಿ ಮಾಡಿ, ಹೂಳು ತೆಗೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇನ್ನು ಸ್ಥಳೀಯರು, ಹಾಗೂ ವಾಹನಗಳು ಬಂದು ಈ ಜಾಗದಲ್ಲಿ ತ್ಯಾಜ್ಯ ಸುರಿದು ಹೋಗುತ್ತಿರುವುದರಿಂದ ಸಮಸ್ಯೆ ಆಗುತ್ತಿತ್ತು. ಸದ್ಯ ಸಮಸ್ಯೆ ಬಗೆಹರಿದಿದೆ ಎಂದರು.
ನಂತರ ನಾಯಂಡಹಳ್ಳಿ ಜಂಕ್ಷನ್ ಪರಿಶೀಲನೆ ನಡೆಸಲಾಯಿತು. ಮಳೆ ನೀರು ನಿಲ್ಲದಂತೆ ಕಾಮಗಾರಿ ಮಾಡಲಾಗುತ್ತಿದೆ. ಹಿಂದೆ ರಾಜಕಾಲುವೆಯಿಂದ ನೀರು ಓವರ್ ಫ್ಲೋ ಆಗಿ ಸಮಸ್ಯೆ ಆಗ್ತಿತ್ತು. ಈಗ ಸರಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಜೊತೆಗೆ ದತ್ತಾತ್ರೆಯ ಲೇಔಟ್ನ ತಡೆಗೋಡೆ ಎತ್ತರಿಸಲಾಗಿದ್ದು, ಈ ಬಾರಿಯ ಮಳೆಗಾಲಕ್ಕೆ ಸಮಸ್ಯೆ ಪರಿಹಾರವಾಗಲಿದೆ ಎಂದರು. ಜೆ.ಸಿ.ರಸ್ತೆ ಹಾಗೂ ಲಾಲ್ ಭಾಗ್ ರಸ್ತೆಯಡಿ ಹಾದುಹೋಗುವ ರಾಜಕಾಲುವೆಯ ಮೇಲೆಯೇ ಎರಡು ಕಟ್ಟಡ ಇದ್ದು, ಇಲ್ಲಿ ಹೂಳು ಸಮಸ್ಯೆ ಆಗ್ತಿದೆ ಎಂದು ಮುಖ್ಯ ಆಯುಕ್ತರ ಗಮನಕ್ಕೆ ತಂದರು.
ಪರಿಶೀಲನೆ ಬಳಿಕ ಮಾತನಾಡಿದ ಮುಖ್ಯ ಆಯುಕ್ತರು, ಬಿಬಿಎಂಪಿ ಕಾಮಗಾರಿಗಳು ನಡೆಯುತ್ತಾ ಇವೆ. ಅಧಿಕಾರಿಗಳು ನಡೆಸುತ್ತಿದ್ದಾರೆ. ಬಜೆಟ್ಗೆ ತಕ್ಕಂತೆ ಹಲವಾರು ಮುಂದುವರಿದ ಕಾಮಗಾರಿಗಳನ್ನು ಮುಕ್ತಾಯ ಮಾಡುವ ಬಗ್ಗೆಯೂ ಆದ್ಯತೆ ಇದೆ. ಮಳೆಗಾಲಕ್ಕೆ ಸಿದ್ಧತೆ ಮಾಡುವ ಬಗ್ಗೆಯೇ ಇಂದು ಪರಿಶೀಲನೆ ನಡೆಸಲಾಗಿದೆ. ದೊಡ್ಡ, ಚಿಕ್ಕ ರಾಜಕಾಲುವೆಗಳನ್ನು ಸುಸ್ಥಿತಿಯಲ್ಲಿಡಬೇಕಿದೆ ಎಂದರು.
ಇನ್ನು ಬ್ಲಾಕ್ ಫಂಗಸ್ ಬಗ್ಗೆ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದ್ದು, ರಾಜ್ಯ ಸರ್ಕಾರದ ಮಟ್ಟದಲ್ಲಿ ಒಬ್ಬರು ವಿಶೇಷ ಅಧಿಕಾರಿಯನ್ನು ನೇಮಿಸಲಾಗಿದೆ. ಮೂರನೇ ಅಲೆಯ ಬಗ್ಗೆಯೂ ರಾಜ್ಯಮಟ್ಟದ ತಾಂತ್ರಿಕ ಸಮಿತಿ ಅಧ್ಯಯನ ಮಾಡ್ತಿದೆ. ಯಾವ ರೀತಿ ಇದು ಹೊಡೆತ ಬೀಳಲಿದೆ, ಯಾವ ರೀತಿ ತಡೆಗಟ್ಟಬಹುದು ಎಂದು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಪ್ರತ್ಯೇಕ ಟಾಸ್ಕ್ ಫೋರ್ಸ್ ಮಾಡುವ ಬಗ್ಗೆಯೂ ಚಿಂತನೆಯಲ್ಲಿದೆ ಎಂದು ತಿಳಿಸಿದರು.