ಬೆಂಗಳೂರು : ರಾಜೀವ್ ಗಾಂಧಿ ಹೆಸರಿನಲ್ಲಿ ನೀಡುತ್ತಿದ್ದ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಾವಣೆ ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಯುವಕರಿಗೆ ಮತದಾನದ ಹಕ್ಕು ಕೊಟ್ಟ ನಾಯಕ ರಾಜೀವ್ ಗಾಂಧಿ.
ಯುವಕರ ಬದುಕು ಬದಲಾವಣೆಗೆ ಅನೇಕ ಕಾರ್ಯಕ್ರಮ ನೀಡಿದ್ರು. ದ್ಯಾನಚಂದ್ ನಮ್ಮ ದೇಶದ ಆಸ್ತಿ. ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡ್ಲಿ. ಬೇರೆ ಯಾವುದೇ ಹೊಸ ಕಾರ್ಯಕ್ರಮಕ್ಕೆ ಚಾಲನೆ ಕೊಡ್ಲಿ. ಗಾಂಧಿ ಕುಟುಂಬದ ಹೆಸರು ಬದಲಾವಣೆ ಸಹಿಸಲು ಸಾಧ್ಯವಿಲ್ಲ. ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ, ಸಹಿಸಲು ಸಾಧ್ಯವಿಲ್ಲ ಎಂದರು.
ಸರ್ದಾರ್ ವಲ್ಲಬಾಯ್ ಪಟೇಲ್ ಪುತ್ಥಳಿ ನಿರ್ಮಾಣ ಮಾಡ್ತೀರಾ. ಸ್ಟೇಡಿಯಂಗೆ ಹೆಸರು ಬದಲಾವಣೆ ಮಾಡ್ತೀರಾ. ಇದು ದೇಶಭಕ್ತಿಯಾ? ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರ ಮಾತನಾಡಿ, ಹೆಸರು ಬದಲಿಸಿ ಎಂದು ಸಿಎಂಗೆ ಸಿ ಟಿ ರವಿ ಟ್ವೀಟ್ ಮಾಡಿದ್ದಾರೆ. ನಾವು ಬಳೆ ತೊಟ್ಟು ಕೂತಿಲ್ಲ. ಹೆಸರು ಬದಲಿಸಲಿ. ಮುಂದೆ ಏನಾಗುತ್ತೋ ನೋಡ್ಲಿ ಎಂದು ಚಾಲೆಂಜ್ ಹಾಕಿದರು.
ನೈಟ್ ಕರ್ಪ್ಯೂ ಇಂದ ಯಾವುದೇ ಪ್ರಯೋಜನ ಇಲ್ಲ. ನಿಮ್ಮಲ್ಲಿ ಬದ್ಧತೆ ಇದ್ದರೆ ಪಿಎಂ ಭೇಟಿ ಮಾಡಿ ವ್ಯಾಕ್ಸಿನೇಷನ್ ಹೆಚ್ಚು ಕೊಡುವ ಬಗ್ಗೆ ಒತ್ತಾಯ ಮಾಡಿ. ವ್ಯಾಕ್ಸಿನೇಷನ್ ಪಡೆಯಲು ಕ್ಯೂ ನಿಂತಿದ್ದಾರೆ. ಇವರು ಕೊರೊನಾ ವ್ಯಾಕ್ಸಿನೇಷನ್ ಕೊಡುವಲ್ಲಿ ವಿಫಲವಾಗಿದ್ದಾರೆ. ಗಡಿ ಮುಚ್ಚಿದ್ರೆ ಅಕ್ಕಪಕ್ಕದ ರಾಜ್ಯಗಳ ಜತೆ ಸಂಬಂಧ ಹಾಳಾಗುತ್ತೆ ಎಂದರು.
ಗಡಿಭಾಗದಲ್ಲಿ ನಿರ್ಬಂಧ ವಿಚಾರ ಮಾತನಾಡಿ, ಅಕ್ಕಪಕ್ಕದ ರಾಜ್ಯಗಳನ್ನೂ ಸರಿಯಾಗಿ ಇಟ್ಟುಕೊಳ್ಳಬೇಕು. ಜನ ಬರದಂತೆ ಬಂದ್ ಮಾಡೋದು ಸರಿಯಲ್ಲ. ಆ ರಾಜ್ಯದವರು ಇಲ್ಲಿ ಕೆಲಸ ಮಾಡ್ತಾರೆ. ಇಲ್ಲಿನವರು ಅಲ್ಲಿಯೂ ಕೆಲಸ ಮಾಡ್ತಿದ್ದಾರೆ. ಅದಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ. ನಿಮ್ಮ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂನಿಂದ ಏನೂ ಪ್ರಯೋಜನವಿಲ್ಲ.
ದೆಹಲಿಯಲ್ಲಿ ಹೋರಾಟ ಮಾಡಿ ವ್ಯಾಕ್ಸಿನ್ ತನ್ನಿ. ವ್ಯಾಕ್ಸಿನ್ ತಂದು ರಾಜ್ಯದ ಜನರಿಗೆ ಕೊಡಿ. ಕೇಂದ್ರದವರು ಲಸಿಕೆ ಕೊಡ್ತಿಲ್ಲ. ಲಸಿಕೆ ಇಲ್ಲದೆ ನೀವು ಏನು ಮಾಡೋಕೆ ಆಗ್ತಿಲ್ಲ. ಇಂದಿಗೂ ಜನ ಲಸಿಕೆಗೆ ಕ್ಯೂ ನಿಲ್ತಿದ್ದಾರೆ. ಮೊದಲು ರಾಜ್ಯದ ಜನರಿಗೆ ಲಸಿಕೆ ಕೊಡಿ ಎಂದರು.
ಸಾರ್ವಜನಿಕರ ಒತ್ತಾಯದ ಮೇರೆಗೆ ಹೆಸರು ಬದಲಿಸಿದ್ದೇವೆಂದು ಹೇಳಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಡಿಮೆ ಮಾಡಿ ಎಂದು ಸಾರ್ವಜನಿಕರ ಒತ್ತಾಯ ಇದೆ. ಕಡಿಮೆ ಮಾಡಿ ಎಂದು ಒತ್ತಾಯ ಮಾಡಿದ ಡಿಕೆಶಿ, ಗಿಮಿಕ್ ಪಾಲಿಟಿಕ್ಸ್ ಮಾಡುವುದು ಬೇಡ. ನಾವು ಸರ್ಕಾರದಲ್ಲಿದ್ದಾಗ ವಾಜಪೇಯಿ ಹೆಸರಲ್ಲಿ ಇರೋದನ್ನ ಬದಲಿಸಲಿಲ್ಲ. ವಾಜಪೇಯಿ ಸಾರಿಗೆ ಹೆಸರು ಬದಲಾವಣೆ ಮಾಡಲಿಲ್ಲ. ನಾವು ದ್ವೇಷದ ರಾಜಕಾರಣ ಮಾಡಲಿಲ್ಲ ಎಂದು ಹೇಳಿದರು.
ಸಂಪತ್ ಆಗಮನ : ಮಾಜಿ ಮೇಯರ್ ಸಂಪತ್ ರಾಜ್ ಇಂದೂ ಕೆಪಿಸಿಸಿ ಕಚೇರಿಗೆ ಆಗಮಿಸಿದರು. ಇವರು ಬರುತ್ತಿದ್ದಂತೆ ಕರೆಸಿ ವೇದಿಕೆ ಮೇಲೆ ಕೂರಿಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತು ಮುಂದುವರಿಸಿದರು.