ಬೆಂಗಳೂರು: ರೈತರು ಮತ್ತು ಸಾರಿಗೆ ಸಂಸ್ಥೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ವಾಹನ ಸವಾರರಿಗೆ ಟ್ರಾಫಿಕ್ ಕಿರಿ ಕಿರಿ ಉಂಟಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶದಂತೆ ಬಹುತೇಕ ರಸ್ತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ನಗರದಲ್ಲಿ ಬಹುತೇಕ ಕಡೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ರಸ್ತೆ ಸಾರಿಗೆ ಸಂಸ್ಥೆ ನೌಕರರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮತ್ತು ಬೃಹತ್ ಜಾಥಾ ನಡೆಸುತ್ತಿದ್ದಾರೆ. ಜೊತೆಗೆ ಭೂ ಸುಧಾರಣಾ ತಿದ್ದುಪಡಿ ಮಸೂದೆ ಅಂಗೀಕಾರ ವಿರೋಧಿಸಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ 2ನೇ ದಿನವೂ ಬಾರುಕೋಲು ಚಳವಳಿ ಮಾಡುತ್ತಿದ್ದಾರೆ.
ಮೆಜೆಸ್ಟಿಕ್, ಮೆಜೆಸ್ಟಿಕ್ ಫ್ಲೈ ಓವರ್ , ಶೇಷಾದ್ರಿ ರಸ್ತೆ, ಕೆ.ಆರ್.ಸರ್ಕಲ್ ಮಾರ್ಗ ಬದಲಾವಣೆ : ಬಸವೇಶ್ವರ ಸರ್ಕಲ್ ಕಡೆ ಎಡಕ್ಕೆ, ನಂತರ ಜೆಡಿಎಸ್ ಹಳೆ ಕಟ್ಟಡ ಮಾರ್ಗವಾಗಿ ಹೋಗಬೇಕು. ರೇಸ್ ಕೋರ್ಸ್ ರಸ್ತೆ ಮಾರ್ಗವಾಗಿ ಚಾಲುಕ್ಯ ಸರ್ಕಲ್, ಸಿಐಡಿ ಮಹಾರಾಣಿ ಕಾಲೇಜ್ ಮೂಲಕ ಕೆ.ಆರ್. ಸರ್ಕಲ್ ತಲುಪಬಹುದು.
ಹೆಬ್ಬಾಳ-ಮೆಜೆಸ್ಟಿಕ್ ಕಡೆ ಮಾರ್ಗ ಬದಲಾವಣೆ: ಹೆಬ್ಬಾಳ ಮಾರ್ಗವಾಗಿ ಹೋಗಿ ಶಿವಾನಂದ ಸರ್ಕಲ್, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್ ಮೂಲಕ ಮೆಜೆಸ್ಟಿಕ್ ತಲುಪಬಹುದು.
ವಿಧಾನಸೌಧ, ರಾಜಭವನದ ಸುತ್ತ ಸಾರ್ವಜನಿಕ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಈ ಮಾರ್ಗದಲ್ಲಿ ಟ್ರಾಫಿಕ್ ಪೊಲೀಸರು ಅಲರ್ಟ್ ಆಗಿದ್ದು, ವಿನಾಕಾರಣ ಓಡಾಟ ನಡೆಸುವುದು, ಗಲಭೆ ಸೃಷ್ಟಿ ಮಾಡುವವರ ಮೇಲೆ ಕಣ್ಣಿಟ್ಟಿದ್ದಾರೆ.