ಬೆಂಗಳೂರು: ರಾಜ್ಯಕ್ಕೆ ಕೋವಿಡ್ ಸೋಂಕು ಕಾಲಿಟ್ಟಿದ್ದೇ ಇಟ್ಟಿದ್ದು ಆಂಬ್ಯುಲೆನ್ಸ್ ಕೊರತೆ ಹೆಚ್ಚಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ ಬೇಕು ಅಂದರೂ ಸಿಗುತ್ತಿಲ್ಲ. ಸದ್ಯ ಇದಕ್ಕೆ ಪರಿಹಾರ ಮಾರ್ಗೋಪಾಯ ಕಂಡುಕೊಂಡಿರುವ ಚೇಂಚ್ ಮೇಕರ್ಸ್ ಆಫ್ ಕನಕಪುರ ರೋಡ್ ಸಂಘಟನೆ ಆಂಬ್ಯುಲೆನ್ಸ್ ಬಾಡಿಗೆ ಪಡೆದಿದೆ.
ಚೇಂಜ್ ಮೇಕರ್ಸ್ ಆಫ್ ಕನಕಪುರ ರೋಡ್ ಸಂಘಟನೆಯಿಂದ ಆಂಬ್ಯುಲೆನ್ಸ್ ಬಾಡಿಗೆ ಪಡೆದಿದ್ದು, ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಬರುವ ಅಪಾರ್ಟ್ಮೆಂಟ್ ಲೇಔಟ್ ನಿವಾಸಿಗಳು ಈ ಹೊಸ ಯೋಜನೆ ಮಾಡಿಕೊಂಡಿದ್ದಾರೆ. ಈ ಸಂಘಟನೆಯು ಆರು ತಿಂಗಳಿಗೆ ವಾಹನ ಬುಕ್ ಮಾಡಿದ್ದು, ಸುಮಾರು 3,800 ಕುಟುಂಬಗಳಿಗೆ ಇದರ ಉಪಯೋಗವಾಗಲಿದೆ.
ಒಂದೊಂದು ಕುಟುಂಬಕ್ಕೆ ತಿಂಗಳಿಗೆ ಕೇವಲ 60 ರೂಪಾಯಿ ಮಾತ್ರ ಖರ್ಚು ಬೀಳುತ್ತೆ. ದಿನದ 24 ಗಂಟೆಯು ಆಂಬ್ಯುಲೇನ್ಸ್ ಲಭ್ಯವಿರಲಿದೆ. ಸಾರಕ್ಕಿ ಸಿಗ್ನಲ್ನಿಂದ ನೈಸ್ ರೋಡ್ ಜಂಕ್ಷನ್ವರೆಗೆ ಒಟ್ಟು 8 ಕಿ.ಮೀ. ಪ್ರದೇಶವನ್ನು ಕವರ್ ಮಾಡಲಾಗುತ್ತೆ.
ಈಗಾಗಲೇ ಹಲವು ಕೊರೊನಾ ರೋಗಿಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆಂಬ್ಯುಲೆನ್ಸ್ನಲ್ಲಿ ಐಸಿಯು, ಪಿಪಿಇ ಕಿಟ್, ಆಕ್ಸಿಜನ್ ಸೇರಿದಂತೆ ಎಲ್ಲಾ ವ್ಯವಸ್ಥೆ ಇದೆ. ಅಲ್ಲದೆ ಇದನ್ನು ಕೋವಿಡ್ ಅಲ್ಲದ ಇತರ ತುರ್ತು ಸಂದರ್ಭಗಳಲ್ಲೂ ಬಳಕೆ ಮಾಡಲಾಗುತ್ತದೆ.