ಬೆಂಗಳೂರು : ಗುತ್ತಿಗೆದಾರರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದ ಆರೋಪದಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್ಐ) ಚಿತ್ರದುರ್ಗದ ಯೋಜನಾ ನಿರ್ದೇಶಕ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ. ಆಂಧ್ರದ ಕಾಳಹಸ್ತಿ ಮೂಲದ ಶ್ರೀನಿವಾಸ್ ನಾಯ್ದು ಚಿತ್ರದುರ್ಗದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈತನ ವಿರುದ್ಧ ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 22ರಂದು ದೇವನಹಳ್ಳಿ ಶ್ರೀನಿವಾಸ್ ಎಂಬುವರ ಕಾರಿನಲ್ಲಿ 3.5 ಲಕ್ಷ ರೂ.ಪತ್ತೆ ಹಚ್ಚಿ ಹಣ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಅದೇ ದಿನ ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ನಾಯ್ಡುಗೆ ಹಣದ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ ಸರಿಯಾಗಿ ಉತ್ತರಿಸಿರಲಿಲ್ಲ. ಹೀಗಾಗಿ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಫ್‌ಐಆರ್‌ನಲ್ಲಿ ಶ್ರೀನಿವಾಸಲು ನಾಯ್ಡು ಅವರು ಚಿತ್ರದುರ್ಗದ ಎನ್‌ಹೆಚ್‌ಎಐನ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದಾಗ ತಮ್ಮ ಕಚೇರಿಯಲ್ಲಿ ಮತ್ತು ಬೆಂಗಳೂರಿನ ಪ್ರವಾಸದಲ್ಲಿರುವಾಗ ವಿವಿಧ ಗುತ್ತಿಗೆದಾರರಿಂದ ಲಂಚವನ್ನು ವಸೂಲಿ ಮಾಡುತ್ತಿದ್ದು ಮತ್ತು ಅದನ್ನು ತಮ್ಮ ಕಾರಿನಲ್ಲಿ ಸಾಗಿಸುತ್ತಿದ್ದರು ಎಂಬ ಮಾಹಿತಿ ಅಧಿಕಾರಿಗಳಿಗೆ ಬಂದಿತ್ತು. ಆಂಧ್ರದ ಕಾಳಹಸ್ತಿ ಅವರ ಹುಟ್ಟೂರಾಗಿದ್ದು, ಅಲ್ಲಿಗೆ ಹಣ ಸಾಗಿಸಲು KA-16-AA-0430 ವಾಹನ ಬಳಸುತ್ತಿದ್ದರು.
ಆಂಧ್ರ ಗಡಿಯಲ್ಲಿ ಕೆಎ ರಿಜಿಸ್ಟರ್ ವಾಹನವನ್ನು ಟೊಯೋಟಾ ಇನ್ನೋವಾ ಹೊಂದಿರುವ ನೋಂದಣಿ ಸಂಖ್ಯೆ AP 39 LA 0456ಗೆ ಬದಲಾಯಿಸಿಕೊಂಡಿದ್ದರು. ಆರೋಪಿ ನಾಯ್ಡು ಅವರು ಕುಟುಂಬ ಸದಸ್ಯರು ಮತ್ತು ತಮ್ಮ ಹೆಸರಿನಲ್ಲಿ ಹಲವಾರು ಆಸ್ತಿಗಳನ್ನು ಸಂಗ್ರಹಿಸಿದ್ದಾರೆ. ಚಿತ್ತೂರು ಜಿಲ್ಲೆಯ ಶ್ರೀ ಕಾಳಹಸ್ತಿ, ಗುಂಟೂರು, ನೆಲ್ಲೂರು, ಬೆಂಗಳೂರಿನ ಯಲಹಂಕ, ಹೈದರಾಬಾದ್‌ನ ಕೋಕಾಪೇಟ್, ತೆಲಂಗಾಣ ಸೇರಿದಂತೆ ವಿವಿಧೆಡೆ ಸ್ಥಿರಾಸ್ತಿಗಳನ್ನು ಸಂಪಾದಿಸಿದ್ದಾರೆ.
ಅಲ್ಲದೆ, ಅಕ್ರಮವಾಗಿ ಸಂಪಾದಿಸಿದ ಹಣದ ಮೂಲಕ ತಿರುಪತಿ ಮತ್ತು ಕಾಳಹಸ್ತಿಯಲ್ಲಿರುವ ವಾಣಿಜ್ಯ ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಮೂಲ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಎಫ್‌ಐಆರ್‌ನಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಗು.ವಿ.ವಿ. ಯಲ್ಲಿ ಮತ್ತೊಂದು ಅಕ್ರಮ: 20 ಸಾವಿರ ರೂ. ಹಣ ಕೊಟ್ಟು ಅಂಕಪಟ್ಟಿ ಪಡೆದ ವಿದ್ಯಾರ್ಥಿಗೆ ಶಾಕ್