ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ ತಿನಿಖೆ ಚುರುಕುಗೊಳಿಸಿರುವ ಸಿಸಿಬಿ, ಮಂಗಳೂರು ಮೂಲದ ಲೇಡಿ ಡ್ರಗ್ ಪ್ಲೆಡರ್ಗೆ ನೋಟಿಸ್ ನೀಡಿ ಕರೆಸಿ ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಬಿಟ್ಟು ಕಳುಹಿಸಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದ ಪೃಥ್ವಿ ಶೆಟ್ಟಿ ಸುಮಾರು ಏಳು ಗಂಟೆಗಳ ಕಾಲ ತೀವ್ರ ವಿಚಾರಣೆ ಎದುರಿಸಿದ್ದಾಳೆ. ಪಾರ್ಟಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಆರೋಪದಡಿ ಈಕೆಗೆ ಸಿಸಿಬಿ ನೋಟಿಸ್ ನೀಡಿತ್ತು. ಸದ್ಯ ಮಹಿಳೆಯಿಂದ ಪ್ರಕರಣಕ್ಕೆ ಸಂಬಂಧಿಸಿದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ನಗರದ ಎಚ್ಎಸ್ಆರ್ ಲೇಔಟ್ನಲ್ಲಿ ವಾಸವಾಗಿದ್ದ ಪೃಥ್ವಿ ಯುವತಿಯರಿಗೆ ಮಾದಕ ವಸ್ತುವನ್ನು ಹೋಂ ಡೆಲಿವರಿ ಮಾಡುತ್ತಿದ್ದಳು. ಅಲ್ಲದೆ ಮನೆಯಲ್ಲೇ ಡ್ರಗ್ಸ್ ಸೇವಿಸಲು ಯುವತಿಯರಿಗೆ ಅನುವು ಮಾಡಿಕೊಡುತ್ತಿದ್ದಳಂತೆ. ಪಾರ್ಟಿಗಳಲ್ಲಿ ಹೋಗಿ ಗ್ರಾಹಕರಿಗೆ ಡ್ರಗ್ಸ್ ನೀಡುತ್ತಿದ್ದಳು ಎನ್ನಲಾಗಿದೆ.
ಪ್ಲಾಸ್ಕ್ ಹಿಡಿದು ಠಾಣೆಗೆ ಬಂದ ಶಂಕಿತ ಆರೋಪಿ: ಮತ್ತೊಂದೆಡೆ ಸಿಸಿಬಿ ಕಚೇರಿಗೆ ಬಂದ ವ್ಯಕ್ತಿ ನಾನೇ ಪ್ರಕರಣದ 13ನೇ ಆರೋಪಿ, ರಾಗಿಣಿ ಜೊತೆ ಇದ್ದದ್ದು ನಾನೆ ಎಂದು ಸಿಸಿಬಿ ಕಚೇರಿಗೆ ಬಂದು ಶರಣಾಗಿದ್ದಾನೆ. ಟೀ ಮಾರುವ ಪ್ಲಾಸ್ಕ್ ಹಿಡಿದು ಬಂದಿರುವ ಅನಿರುದ್ಧ್ ಎಂಬಾತನ ಮೇಲೆ ಪೊಲೀಸರಿಗೆ ಅನುಮಾನ ಬಂದಿದ್ದು ಸದ್ಯ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಡ್ರಗ್ಸ್ ಕೇಸ್ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ರಾಗಿಣಿ ಸೇರಿದಂತೆ 12 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ. ಸದ್ಯ ಸಿಸಿಬಿ ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ.